ದೇಶದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್‌ ಬಗ್ಗೆ ಮಾಹಿತಿ ತಿಳಿಯಿರಿ

ದೇಶದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್‌ ಬಗ್ಗೆ ಮಾಹಿತಿ ತಿಳಿಯಿರಿ

ಭಾರತದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್‌ ಬಗ್ಗೆ ನಿಮಗೆ ತಿಳಿದಿದೆಯೇ?. ಗರ್ಭನಿರೋಧಕ ತಯಾರಕ ಸಂಸ್ಥೆಯಾದ ಫ್ಯಾಮಿ ಕೇರ್ ಸಂಸ್ಥಾಪಕ ಜೆ ಪಿ ತಪರಿಯಾ ಭಾರತದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್ ಒಂದನ್ನು ಮಾಡಿಕೊಂಡಿದ್ದಾರೆ. ಜೆ ಪಿ ತಪರಿಯಾ ದಕ್ಷಿಣ ಮುಂಬೈನ ಮಲಬಾರ್ ಬೆಟ್ಟದಲ್ಲಿ (Malabar Hill) ಅಪಾರ್ಟ್‌ಮೆಂಟ್ ಒಂದರಲ್ಲಿ ಮೂರು ಅಂತಸ್ತನ್ನು (triplex) ಖರೀದಿ ಮಾಡಿದ್ದಾರೆ.

ಈ ಐಷಾರಾಮಿ ಅಪಾರ್ಟ್‌ಮೆಂಟ್ ಸಮುದ್ರಮುಖಿಯಾಗಿದ್ದು, ಸುಂದರ ದೃಶ್ಯವನ್ನು ಕಾಣಬಹುದಾಗಿದೆ.

ವರದಿ ಪ್ರಕಾರ ಈ ಡೀಲ್ ಲೂದಾ ಗ್ರೂಪ್‌ ಹಾಗೂ ಫ್ಯಾಮಿ ಕೇರ್ ಸಂಸ್ಥಾಪಕ ಜೆ ಪಿ ತಪರಿಯಾ ನಡುವೆ ಸುಮಾರು 369 ಕೋಟಿ ರೂಪಾಯಿಗೆ ನಡೆದಿದೆ. ವಾಕೇಶ್ವರ ರಸ್ತೆರಲ್ಲಿರುವ ಅತೀ ಹೆಚ್ಚಿನ ಐಷಾರಾಮಿ ವಸತಿ ಅಪಾರ್ಟ್‌ಮೆಂಟ್ ಆದ ಲೂದಾ ಮಲಬಾರ್‌ನ 26, 27 ಹಾಗೂ 28ನೇ ಮಹಡಿಯನ್ನು ಖರೀದಿ ಮಾಡಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಈ ಹಿಂದೆ ಡಿಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ಧಾಮಿನಿ ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್‌ಗೆ ಬರೋಬ್ಬರಿ 1238 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ದೇಶದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್‌ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಐಷಾರಾಮಿ ಮಹಡಿಯ ಬಗ್ಗೆ ತಿಳಿಯಿರಿ

369 ಕೋಟಿ ರೂಪಾಯಿಗೆ ಅಪಾರ್ಟ್‌ಮೆಂಟ್ ಮೂರು ಅಂತಸ್ತಿನ ಖರೀದಿಯು ಈವರೆಗೆ ಅತೀ ದುಬಾರಿ ಡೀಲ್ ಆಗಿದೆ ಎಂದು ಇಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಒಟ್ಟು ವಿಸ್ತಾರ 27,160 ಸ್ಕ್ವೇರ್ ಫೀಟ್ ಇದೆ. ಪ್ರತಿ ಸ್ಕ್ವೇರ್‌ಗೆ 1.36 ಲಕ್ಷ ರೂಪಾಯಿ ಆಗಿದ್ದು ಈ ಲೆಕ್ಕಾಚಾರದಲ್ಲಿ ನಡೆದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್ ಇದಾಗಿದೆ ಎಂದು ವರದಿಯಾಗಿದೆ. ಭಾರತದ ಐಷಾರಾಮಿ ಮನೆಯ ಮಾರುಕಟ್ಟೆಯಲ್ಲಿ ನಡೆದ ಇತ್ತೀಚಿನ ಹೊಸ ಡೆವಲಪ್‌ಮೆಂಟ್ ಇದಾಗಿದೆ. ಅತೀ ಬೇಡಿಕೆಯ ನಡುವೆ ಈ ಮನೆಯು ಮಾರಾಟವಾಗಿದೆ.

ಫಬ್ರವರಿಯಲ್ಲಿ ಡಿಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ಧಾಮಿನಿ 1238 ಕೋಟಿ ರೂಪಾಯಿಗೆ ರಿಯಲ್‌ ಎಸ್ಟೇಟ್ ಡೀಲ್ ಮಾಡಿಕೊಂಡಿದ್ದಾರೆ. ಆ ಡೀಲ್ ಕೂಡಾ ಮುಂಬೈನಲ್ಲೇ ನಡೆದಿದೆ. ಈವರೆಗಿನ ಅತೀ ದೊಡ್ಡ ಪ್ರಾಪರ್ಟಿ ಡೀಲ್ ರಾಧಾಕೃಷ್ಣ ಧಾಮಿನಿ ನಡೆಸಿರುವ ಡೀಲ್ ಆಗಿದೆ. ಅದೇ ತಿಂಗಳಲ್ಲಿ, ರಿಯಲ್ ಎಸ್ಟೇಟ್ ಡೆವಲಪರ್ ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಪ್ರೀಮಿಯಂ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಚೆಂಬೂರಿನಲ್ಲಿ ರಾಜ್ ಕಪೂರ್ ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿತು.

ಕಳೆದ ವಾರ, ರಿಯಾಲ್ಟಿಯ ಪ್ರಮುಖ ಸಂಸ್ಥೆ ಡಿಎಲ್‌ಎಫ್ ಲಿಮಿಟೆಡ್ ಗುರುಗ್ರಾಮ್‌ನಲ್ಲಿನ ತನ್ನ ವಸತಿ ಯೋಜನೆಯಲ್ಲಿ 7 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ 1,137 ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು 3 ದಿನಗಳಲ್ಲಿ 8,000 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಘೋಷಣೆ ಮಾಡಿದೆ.

ಜೆ ಪಿ ತಪರಿಯಾ ಯಾರು?

ಜೆ ಪಿ ತಪರಿಯಾ ಗರ್ಭನಿರೋಧಕ ತಯಾರಕ ಸಂಸ್ಥೆಯಾದ ಫ್ಯಾಮಿ ಕೇರ್ ಸಂಸ್ಥಾಪಕರಾಗಿದ್ದಾರೆ. ಜಾಗತಿಕವಾಗಿ ಕಾಪರ್-ಟಿಗಳ ಅತಿದೊಡ್ಡ ಉತ್ಪಾದಕ ಸಂಸ್ಥೆ ಇವರದ್ದಾಗಿದೆ. ಫೋರ್ಬ್ಸ್ ಪ್ರಕಾರ, ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ವಿಶ್ವದ ಮಹಿಳೆಯರ ಪೈಕಿ ಸುಮಾರು 15 ಪ್ರತಿಶತದಷ್ಟು ಮಹಿಳೆಯರು ಫ್ಯಾಮಿ ಕೇರ್ ಉತ್ಪಾದನೆ ಮಾಡಿದ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದಾರೆ. 1990 ರವರೆಗೆ ಜೆ ಪಿ ತಪರಿಯಾ ತಮ್ಮ ಕುಟುಂಬದ ಹ್ಯಾಂಡ್ ಟೂಲ್ಸ್ & ಇಂಜಿಯರಿಂಗ್ ವಹಿವಾಟು ನಡೆಸುತ್ತಿದ್ದರು. ಅದಾದ ಬಳಿಕ ತಮ್ಮದೇ ಆದ ಗರ್ಭನಿರೋಧಕ ತಯಾರಕ ಸಂಸ್ಥೆಯನ್ನು ಆರಂಭಿಸಿದರು. ಈಗ ವಿಶ್ವದಲ್ಲೇ ಪ್ರಮುಖ ಗರ್ಭನಿರೋಧಕ ಮಾತ್ರೆಗಳ ತಯಾರಕರಲ್ಲಿ ಒಬ್ಬರಾಗಿದ್ದಾರೆ.