ಜಮ್ಮು-ಕಾಶ್ಮೀರದ ಮೇಲೆ ಕಣ್ಣಿಟ್ಟ ಆಮಿರ್​ ಖಾನ್​; ಗವರ್ನರ್​ ಭೇಟಿ ಬಳಿಕ ಹೊರಬಿತ್ತು ಸುದ್ದಿ

ಜಮ್ಮು-ಕಾಶ್ಮೀರದ ಮೇಲೆ ಕಣ್ಣಿಟ್ಟ ಆಮಿರ್​ ಖಾನ್​; ಗವರ್ನರ್​ ಭೇಟಿ ಬಳಿಕ ಹೊರಬಿತ್ತು ಸುದ್ದಿ

ನಟ ಆಮಿರ್​ ಖಾನ್ (Aamir Khan)​ ಅವರು ಹಲವು ಕಾರಣಗಳಿಗಾಗಿ ಇತ್ತೀಚೆಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಬಹುವರ್ಷಗಳಿಂದ ತಮ್ಮ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದ ಕಿರಣ್​ ರಾವ್​ (Kiran Rao) ಅವರಿಗೆ ವಿಚ್ಛೇದನ ನೀಡಿದ ಬಳಿಕ ಆಮಿರ್​ ಖಾನ್​ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆ ಆಗತೊಡಗಿತು. ಅದರ ಬೆನ್ನಲೇ ಅವರು ಹೊಸ ಸುದ್ದಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ (Jammu Kashmir) ಮೇಲೆ ಈಗ ಆಮಿರ್​ ಖಾನ್​ ಕಣ್ಣು ಬಿದ್ದಿದೆ. ತಮ್ಮ ಸಿನಿಮಾಗಳಲ್ಲಿ ಜಮ್ಮು-ಕಾಶ್ಮೀರವನ್ನು ಇನ್ನಷ್ಟು ಚೆನ್ನಾಗಿ ತೋರಿಸುವ ಪ್ಲ್ಯಾನ್​ ಸಿದ್ಧವಾಗುತ್ತಿದೆ. ಈ ಬಗ್ಗೆ ಅಧಿಕೃತ ಮೂಲದಿಂದಲೇ ಸುದ್ದಿ ಹೊರಬಿದ್ದಿದೆ.

ಆಮಿರ್​ ಖಾನ್​ ಅವರ ಹೊಸ ಸಿನಿಮಾ 'ಲಾಲ್​ ಸಿಂಗ್​ ಚಡ್ಡಾ' ಶೂಟಿಂಗ್​ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಚಿತ್ರೀಕರಣ ಪೂರ್ಣಗೊಂಡ ಬಳಿಕ ಅವರು ಅಲ್ಲಿಯೇ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಳಿಕ ಜಮ್ಮು-ಕಾಶ್ಮೀರ ಗವರ್ನರ್​ ಮನೋಜ್​ ಸಿನ್ಹಾ ಅವರನ್ನು ಭೇಟಿ ಮಾಡಿ ಕೆಲವು ಮುಖ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಆಮಿರ್​ ಮಾಜಿ ಪತ್ನಿ ಕಿರಣ್​ ರಾವ್​ ಕೂಡ ಜೊತೆಗಿದ್ದರು.

ಈ ಕುರಿತು ಮನೋಜ್​ ಸಿನ್ಹಾ ಅವರು ಟ್ವೀಟ್​ ಮಾಡಿದ್ದಾರೆ. 'ಕಿರಣ್​ ರಾವ್​ ಮತ್ತು ಆಮಿರ್​ ಖಾನ್​ ಅವರನ್ನು ಇಂದು ಭೇಟಿ ಮಾಡಿದೆ. ಜಮ್ಮು-ಕಾಶ್ಮೀರದ ಹೊಸ ಸಿನಿಮಾ ನೀತಿ ಬಗ್ಗೆ ಚರ್ಚೆ ಮಾಡಿದೆವು. ಶೀಘ್ರದಲ್ಲೇ ಅದರ ವಿವರವನ್ನು ಬಿಡುಗಡೆ ಮಾಡಲಿದ್ದೇವೆ. ಜಮ್ಮು-ಕಾಶ್ಮೀರದ ವೈಭವವನ್ನು ಬಾಲಿವುಡ್​ ಸಿನಿಮಾಗಳಲ್ಲಿ ತೋರಿಸುವುದು ಮತ್ತು ಈ ಪ್ರದೇಶವನ್ನು ನೆಚ್ಚಿನ ಶೂಟಿಂಗ್ ಸ್ಥಳವಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯಿತು' ಎಂದು ಅವರು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

'ಇಲ್ಲಿನ ಜನರು ತುಂಬಾ ಒಳ್ಳೆಯವರು. ಇಲ್ಲಿ ಕೆಲಸ ಮಾಡಿದ ಅನುಭವ ತುಂಬ ಚೆನ್ನಾಗಿತ್ತು. ಮೂಲ ಸೌಕರ್ಯಗಳು ಸಾಕಷ್ಟು ಮುಂದುವರಿದಿವೆ. ನಮ್ಮ ದೊಡ್ಡ ಚಿತ್ರತಂಡಕ್ಕೆ ಉಳಿದುಕೊಳ್ಳಲು ಯಾವುದೇ ತೊಂದರೆ ಆಗಲಿಲ್ಲ. ಚಿತ್ರೀಕರಣದ ಸ್ಥಳಕ್ಕೆ ತೆರಳಲು ಒಂದು ಗಂಟೆ ಸಮಯ ಬೇಕಾಗುತ್ತಿತ್ತು. ನಾನು ಮತ್ತು ನಾಗ ಚೈತನ್ಯ ಡ್ರೈವಿಂಗ್​ ಮಾಡುವಾಗ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದೆವು' ಎಂದು ಲಡಾಕ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಮಿರ್​ ಖಾನ್ ಹೇಳಿದರು.