ಲವರ್​ ಜೊತೆ ಹೊಸ ಜೀವನ ನಡೆಸಲು ಬಂದವಳು ಅರೆಸ್ಟ್​..!

ಲವರ್​ ಜೊತೆ ಹೊಸ ಜೀವನ ನಡೆಸಲು ಬಂದವಳು ಅರೆಸ್ಟ್​..!

ಹುಬ್ಬಳ್ಳಿ: ಪ್ರಿಯತಮನ ಜೊತೆ ಹೊಸ ಜೀವನ ಆರಂಭಿಸಲು ಹೊರಟವಳು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಶಬನಂ ಬಂಧಿತ ಆರೋಪಿ.

ಹುಬ್ಬಳ್ಳಿಯ ರಾಮಲಿಂಗೇಶ್ವರ ನಿವಾಸಿ ಶಬನಂ ಎನ್ನುವಾಕೆ ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದು, ಮಂಡ್ಯ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು.

ಪ್ರೀತಿಸಿದ ಯುವಕನ‌ ಜೊತೆಗೆ ಹೊಸ ಬದುಕು ಕಟ್ಟಿಕೊಳ್ಳಲು ಹೊರಟ ಶಬನಂ, ಶನಿವಾರ ಹುಬ್ಬಳಿಯಿಂದ ಬೆಂಗಳೂರಿಗೆ ಬಸ್​ ಹತ್ತಿದ್ದಾಳೆ. ಹೋಗುವಾಗ ಸಂಬಂಧಿಕರೊಬ್ಬರ ಆರು ವರ್ಷದ ಮಗಳನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾಳೆ.

ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಶಬನಂ, ಸಂಜೆಯಾದರೂ ಮನೆಗೆ ಬಾರದ ಕಾರಣ ಬಾಲಕಿ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಆಕೆಯ ಮೊಬೈಲ್​ ಕರೆ ಮಾಡಿದಾಗ ಯಾವುದೇ ಉತ್ತರ ಬಂದಿರಲಿಲ್ಲ. ಹೀಗಾಗಿ ಬಾಲಕಿ ಪೋಷಕರು ಹುಬ್ಬಳ್ಳಿಯ ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ಮಗುವಿನ ರಕ್ಷಣೆಗೆ ತಂಡ ರಚಿಸಿದ್ದಾರೆ. ಶಬನಂ ಫೋನ್​ ಟ್ರೇಸ್​ ಮಾಡಿದಾಗ ಬೆಂಗಳೂರಿನಲ್ಲಿರುವುದು ಪತ್ತೆಯಾಗಿದೆ. ಕೂಡಲೇ ಹುಬ್ಬಳ್ಳಿ ಪೊಲೀಸರು, ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಪ್ರಿಯಕರನ ಸಹಾಯದಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ.