ರಾಜ್ಯದಾದ್ಯಂತ ಓಡಾಡಿ ಪಕ್ಷವನ್ನು ಮರು ಸಂಘಟನೆ ಮಾಡುತ್ತೇನೆ: ಯಡಿಯೂರಪ್ಪ
ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆ ಬಳಿಕ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಓಡಾಡಿ ಪಕ್ಷವನ್ನು ಮರು ಸಂಘಟನೆ ಮಾಡುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು 'ಜನಪ್ರತಿನಿಧಿಗಳು ನಿರಂತರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳ ಬಗ್ಗೆ ಜನರಿಗೆ ನಂಬಿಕೆ ಮತ್ತು ವಿಶ್ವಾಸ ಕಡಿಮೆಯಾಗುತ್ತಿದೆ. ಜನರಿಂದ ಆಯ್ಕೆಯಾಗಿ ಬಂದವರು ಜನರ ನಡುವೆ ಇದ್ದರೆ ಮಾತ್ರ ಅವರಿಗೆ ಗೌರವ, ಬೆಲೆ ಸಿಗುತ್ತದೆ' ಎಂದರು.
'ಈಗಿನ ರಾಜಕಾರಣದಲ್ಲಿ ಅನೇಕರು ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ಹಿಂದೇಟು ಹಾಕುತ್ತಿರುವಾಗ; ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ಕೊಟ್ಟಿದ್ದೇನೆ. ಮಹಿಳಾ ಸಬಲೀಕರಣ ಮಾಡಬೇಕು, ಅವರ ಕೈಗೆ ಹೆಚ್ಚು ಅಧಿಕಾರ ಸಿಗಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಸವಲತ್ತುಗಳನ್ನು ನೀಡಿವೆ. ಮಹಿಳಾ ಜನಪ್ರತಿನಿಧಿಗಳು ಗ್ರಾಮ ಮಟ್ಟದಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡಬೇಕು' ಎಂದು ಕರೆ ನೀಡಿದರು.
'ಹಣಬಲ, ತೋಳ್ಬಲ ಹಾಗೂ ಜಾತಿಯ ವಿಷಬೀಜವನ್ನು ಮತದಾರರಲ್ಲಿ ಬಿತ್ತಿ ವಾಮ ಮಾರ್ಗದಲ್ಲಿ ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆದ್ದಿದೆ. ಇದು ಸಾರ್ವತ್ರಿಕ ಚುನಾವಣೆಯ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದನ್ನು ಹತ್ತಲು ಯಾರೂ ಇಷ್ಟಪಡುವುದಿಲ್ಲ. ಮುಂದಿನ 20 ವರ್ಷ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರತ್ತ ಜಗತ್ತೇ ತಿರುಗಿ ಹೆಮ್ಮೆಯಿಂದ ನೋಡುತ್ತಿದೆ. ಅವರಿಗೆ ಸಿಗುತ್ತಿರುವ ಉತ್ಕೃಷ್ಟ ಗೌರವ ನಮಗೇ ಸಿಗುತ್ತಿದೆ ಎಂದು ನಾವೆಲ್ಲರೂ ಭಾವಿಸಬೇಕಿದೆ' ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ಕನಿಷ್ಠ 18 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಇದಕ್ಕಾಗಿ ಪಕ್ಷದ ಮುಖಂಡರು ನಾಲ್ಕು ತಂಡಗಳಲ್ಲಿ ರಾಜ್ಯದಾದ್ಯಂತ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಅಂದುಕೊಂಡಷ್ಟು ಸ್ಥಾನಗಳನ್ನು ನಾವು ಈಗಾಗಲೇ ಗೆದ್ದಾಗಿದೆ; ಗೆಲುವಿನ ಅಂತರವಷ್ಟೇ ಗೊತ್ತಾಗಬೇಕಿದೆ ಎಂದರು.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ 'ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸೀಮಿತ ಸಂಖ್ಯೆಯಲ್ಲಿದ್ದ ಸೌಲಭ್ಯವನ್ನು ಹೆಚ್ಚಿಸಿದ್ದು ಬಿಜೆಪಿ ಸರ್ಕಾರ. ಸದಸ್ಯರಿಗೆ ಮಾಸಿಕವಾಗಿ ಸಿಗುತ್ತಿದ್ದ ₹250 ಗೌರವ ಧನವನ್ನು ₹1,000 ಹೆಚ್ಚಿಸಿದ್ದು ಯುಡಿಯೂರಪ್ಪನವರು. ಪ್ರಧಾನಿ ನರೇಂದ್ರ ಮೋದಿ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕೋಟ್ಯಂತರ ರೂಪಾಯಿ ನೀಡಿದ್ದಾರೆ' ಎಂದರು.
ಸಚಿವರಾದ ಗೋವಿಂದ ಕಾರಜೋಳ, ಶಂಕರಪಾಟೀಲ ಮುನೇನಕೊಪ್ಪ, ಬಿ. ಶ್ರೀ ರಾಮುಲು, ಪಕ್ಷದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ, ಶಾಸಕರಾದ ಸಿ.ಎಂ. ನಿಂಬಣ್ಣನವರ, ಅಮೃತ ದೇಸಾಯಿ, ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಮುಖಂಡರಾದ ಸುಧಾ ಜಯರುದ್ರೇಶ, ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಎಂ.ಆರ್. ಪಾಟೀಲ, ನಾಗೇಶ ಕಲಬುರ್ಗಿ, ವೀರೇಶ ಅಂಚಟಗೇರಿ, ಎಸ್.ಐ. ಚಿಕ್ಕನಗೌಡ್ರ, ಮೋಹನ ಲಿಂಬಿಕಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.