ಅಶ್ಲೀಲ ವಿಡಿಯೋ ಪ್ರಕರಣ: ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ; ಶಿಲ್ಪಾ ಶೆಟ್ಟಿ ಮನವಿ

ಅಶ್ಲೀಲ ವಿಡಿಯೋ ಪ್ರಕರಣ: ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ; ಶಿಲ್ಪಾ ಶೆಟ್ಟಿ ಮನವಿ

ಮುಂಬೈ: ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು, ತಾಯಿಯಾಗಿ ಕೇಳಿಕೊಳ್ಳುತ್ತಿದ್ದೇನೆ ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.

ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಪ್ರಸರಣ ಪ್ರಕರಣ ಸಂಬಂಧ ಜುಲೈ 19ರಂದು ಮುಂಬೈ ಅಪರಾಧ ವಿಭಾಗ ಉದ್ಯಮಿ ರಾಜ್ ಕುಂದ್ರಾರನ್ನು ಬಂಧಿಸಿತ್ತು. ಅಶ್ಲೀಲ ಚಿತ್ರಗಳ ಸೃಷ್ಟಿ ಮತ್ತು ಕೆಲವು ಆಯಪ್‌ಗಳ ಮೂಲಕ ಅವುಗಳ ಪ್ರಸರಣ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಲಾಗಿದೆ.

ಇನ್ನು ರಾಜ್ ಕುಂದ್ರಾ ವಿಚಾರವಾಗಿ ದಿನಕ್ಕೊಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕುಟುಂಬವನ್ನು ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಮನನೊಂದು ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೆ ನೀಡಿರುವ ಶಿಲ್ಪಾ ಶೆಟ್ಟಿ ಮುಂಬೈ ಪೊಲೀಸರು ಮತ್ತು ಭಾರತೀಯ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದ್ದು, ನಿಪಕ್ಷಪಾತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸುತ್ತಾರೆ ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈ ವಿಚಾರವಾಗಿ ಕಳೆದ ಕೆಲವು ದಿನಗಳು ನನಗೆ ಸವಾಲುಗಳು ಎದುರಾಗಿವೆ. ಸಾಕಷ್ಟು ವದಂತಿಗಳು ಮತ್ತು ಆರೋಪಗಳು ಕೇಳಿ ಬಂದಿವೆ. ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ, ನನ್ನ ಪರವಾಗಿ ಸುಳ್ಳು ಹೇಳಿಕೆಗಳನ್ನು ನೀಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

ನಾನು ಹೆಮ್ಮೆಯ ಕಾನೂನು ಪಾಲಿಸುವ ಭಾರತೀಯ ಪ್ರಜೆ. ಜೊತೆಗೆ ಕಳೆದ 29 ವರ್ಷಗಳಿಂದ ಕಠಿಣ ಪರಿಶ್ರಮದ ವೃತ್ತಿಪರತೆಯನ್ನು ಕಾಪಾಡಿಕೊಂಡು ಬರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.