ಮತಾಂತರ ನಿಷೇಧ ಕಾಯ್ದೆ: ಧರ್ಮದ ಹಕ್ಕುಗಳನ್ನು ಮೊಟಕುಗೊಳಿಸುವುದು ನಮ್ಮ ಉದ್ದೇಶವಲ್ಲ; ಸ್ಪಷ್ಟನೆ ನೀಡಿದ ಗೃಹ ಸಚಿವ

ಮತಾಂತರ ನಿಷೇಧ ಕಾಯ್ದೆ: ಧರ್ಮದ ಹಕ್ಕುಗಳನ್ನು ಮೊಟಕುಗೊಳಿಸುವುದು ನಮ್ಮ ಉದ್ದೇಶವಲ್ಲ; ಸ್ಪಷ್ಟನೆ ನೀಡಿದ ಗೃಹ ಸಚಿವ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಮಸೂದೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಗಿದ್ದು, ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧವಲ್ಲ. ಬಲವಂತದ ಮತಾಂತರಕ್ಕೆ ಕಾನೂನಿನಡಿಯಲ್ಲಿ ಶಿಕ್ಷೆ ಇದೆ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಮತಾಂತರ ನಿಷೇಧ ವಿಧೇಯಕದ ಚರ್ಚೆ ಆರಂಭವಾಗಿದ್ದು, ಈ ಕುರಿತು ಮಾತನಾಡಿದ ಗೃಹ ಸಚಿವರು, ಮತಾಂತರ ನಿಷೇಧ ಕಾಯ್ದೆ ಮೂಲಕ ನಾವು ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸುತ್ತಿಲ್ಲ. ಈಗಾಗಲೇ 8 ರಾಜ್ಯಗಳು ಈ ಕಾಯ್ದೆ ಜಾರಿಗೆ ತಂದಿದೆ. ಕರ್ನಾಟಕ 9ನೇ ರಾಜ್ಯವಾಗಲಿದೆ ಎಂದರು.

ಮತಾಂತರ ಕಾರಣಕ್ಕೆ ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದರು. ಹಲವರು ಬಲವಂತದ ಮತಾಂತರದ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಮತಾಂತರ ನಿಷೇಧ ಮಾಡುವಂತೆ ಒತ್ತಾಯಗಳು ಕೇಳಿಬಂದಿವೆ. ಹಾಗಾಗಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ, ಕಾನೂನಿನಡಿಯಲ್ಲಿ ಶಿಕ್ಷೆ ಇದೆ ಎಂಬುದನ್ನು ಈ ಮೂಲಕ ತಿಳಿಸಲಾಗುತ್ತಿದೆ. ಮತಾಂತರ ನಿಷೇಧ ಕಾಯ್ದೆ, ಹಿಂದಿನ ಸರ್ಕಾರದ ಶಿಶು. ಇದು ನಮ್ಮದಲ್ಲ ಎಂದು ಹೇಳಿದರು.

ಬಲವಂತದ ಮತಾಂತರದ ಉದ್ದೇಶದಿಂದ ಮದುವೆಯಾದರೆ ಅದು ಅಸಿಂಧುವಾಗುತ್ತೆ. ಜಾಮೀನು ರಹಿತ ಪ್ರಕರಣ ದಾಖಲಾಗುತ್ತದೆ. ಬಲವಂತದ ಮತಾಂತರಕ್ಕೆ 3-5 ವರ್ಷ ಜೈಲು, 50 ಸಾವಿರ ದಂಡ, ಸಾಮೂಹಿಕ ಮತಾಂತರ ಉಲ್ಲಂಘನೆಗೆ 3-10 ವರ್ಷ ಜೈಲು 1 ಲಕ್ಷ ದಂಡ. ಮತಾಂತರದಿಂದ ಬಲಿಯಾದರೆ ಆಪಾದಿತನಿಂದ 5 ಲಕ್ಷ ದಂಡ ಹಾಗೂ ನ್ಯಾಯಾಲಯ ನೀಡುವ ಶಿಕ್ಷೆಗೆ ಒಳಪಡಬೇಕು ಎಂದು ವಿವರಿಸಿದರು.