ಮೈಸೂರಿಗೂ ವಕ್ಕರಿಸಿದ ಓಮಿಕ್ರಾನ್, 9 ವರ್ಷದ ಮಗುವಿಗೆ ಪಾಸಿಟಿವ್
ಮೈಸೂರು,ಡಿ.23- ಸಾಂಸ್ಕøತಿಕ ನಗರಿ ಮೈಸೂರಿಗೂ ಓಮಿಕ್ರಾನ್ ವಕ್ಕರಿಸಿದೆ. ವಿದೇಶದಿಂದ ಆಗಮಿಸಿರುವ 9 ವರ್ಷದ ಮಗುವಿಗೆ ಓಮಿಕ್ರಾನ್ ಸೋಂಕು ತಗುಲಿರುವುದರಿಂದ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಮಗುವಿಗೆ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಓಮಿಕ್ರಾನ್ ಕಾಣಿಸಿಕೊಂಡಿರುವುದರಿಂದ ಮಗುವನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜತೆಗೆ ಮಗುವಿನೊಂದಿಗೆ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ. ಮಗುವಿನ ಪೋಷಕರನ್ನು ತಪಾಸಣೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಐದು ಮಂದಿಗೆ ಓಮಿಕ್ರಾನ್: ಮೈಸೂರಿನಲ್ಲಿ 9 ವರ್ಷದ ಮಗುವಿಗೆ ಓಮಿಕ್ರಾನ್ ಕಾಣಿಸಿಕೊಂಡಿರುವ ಬೆನ್ನಲ್ಲೆ ರಾಜ್ಯದ ಇತರ ಭಾಗಗಳಲ್ಲೂ ಐದು ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವ ಸಾಧ್ಯತೆಗಳಿವೆ.
ಈಗಾಗಲೆ ಹಲವಾರು ಮಂದಿಯ ಮಾದರಿಯನ್ನು ಜಿನೋಮ್ ಸಿಕ್ವೇನ್ಸಿ ಪರೀಕ್ಷೆಗೆ ರವಾನಿಸಲಾಗಿದ್ದು, ಸಂಜೆ ವೇಳೆಗೆ ವರದಿ ಕೈ ಸೇರಲಿದ್ದು, ಎಷ್ಟು ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ ಎನ್ನುವುದನ್ನು ದೃಢಪಡಿಸುವುದಾಗಿ ಅಕಾರಿಗಳು ತಿಳಿಸಿದ್ದಾರೆ.
ಒಂದು ಅಂದಾಜಿನ ಪ್ರಕಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐದು ಮಂದಿಗೆ ಓಮಿಕ್ರಾನ್ ಸೋಂಕು ವಕ್ಕರಿಸಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ಉಲ್ಲೇಖಿಸಿವೆ.