'ಪಠಾಣ್' ಚಿತ್ರಕ್ಕೆ 10 ಕಡೆ ಕತ್ತರಿ ಪ್ರಯೋಗಿಸಿ U/A ಸರ್ಟಿಫಿಕೇಟ್ ಕೊಟ್ಟ ಸೆನ್ಸಾರ್ ಬೋರ್ಡ್

ಬಾಲಿವುಡ್ ಸೆನ್ಸಾರ್ ಮಂಡಳಿ ಕೊನೆಗೂ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಸಿನಿಮಾಗೆ ಸೆನ್ಸಾರ್ ಸರ್ಟೀಫಿಕೇಟ್ ನೀಡಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದು, ನಟಿ ದೀಪಿಕಾ ಪಡುಕೋಣೆ ಡ್ಯಾನ್ಸ್ ಮಾಡಿರುವ 'ಬೇಷರಂ ರಂಗ್' ಹಾಡಿನ ಅಶ್ಲೀಲ ಭಂಗಿಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.
ಪಠಾಣ್ ಸಿನಿಮಾದ ಕೆಲವು ಪದಗಳನ್ನು ಮಾರ್ಪಾಡು ಮಾಡುವಂತೆ ಸೂಚಿಸಿದೆ. ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದಂತೆ. 'ಲಂಗ್ಡೆ ಲುಲ್ಲೆ' ಪದದ ಬದಲು 'ಟೂಟೆ ಪೂಟೆ' ಎಂದು ಬದಲಾಯಿಸಲು, 13 ಕಡೆ 'ಪಿಎಂಓ' ಪದವನ್ನು ತಗೆದು ಹಾಕುವಂತೆ ಸೂಚಿಸಿದೆ. 'ಮಿಸಸ್ ಭಾರತ್ ಮಾತಾ' ಎನ್ನುವ ಮಾತಿನ ಬದಲಾಗಿ 'ಹಮಾರಿ ಭಾರತ್ ಮಾತಾ' ಎಂದು ಡಬ್ ಮಾಡುವಂತೆ ಸೂಚಿಸಿದೆ. ಹೀಗೆ ಸಾಕಷ್ಟು ಪದಗಳನ್ನು ಬದಲಿಸಿ, ಬೇರೆ ಪದವನ್ನು ಬಳಸುವಂತೆ ಸೆನ್ಸಾರ್ ಮಂಡಳಿಯು ಸೂಚಿಸಿದೆ.
ಸೆನ್ಸಾರ್ ಮಂಡಳಿಯು ಏನೇ ಸೂಚಿಸಿದ್ದರು, ಚಿತ್ರತಂಡ ಚಿತ್ರಿಕೆಗಳನ್ನು ಕಟ್ ಮಾಡಿದ್ದರೂ, ಪ್ರತಿಭಟನೆ ಮಾತ್ರ ನಿಂತಿಲ್ಲ. ಇವತ್ತು ಗುಜರಾತ್ ನ ಅಹ್ಮದಾಬಾದ್ ನ ಮಾಲ್ ಒಂದರಲ್ಲಿ ಪಠಾಣ್ ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು. ಈ ಪೋಸ್ಟರ್ ಅನ್ನು ತಗೆದು ಹಾಕುವಂತೆ ಭಜರಂಗ ದಳದ ಕಾರ್ಯಕರ್ತರು ಥಿಯೇಟರ್ ಮಾಲೀಕರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಪುರಸ್ಕರಿಸದೇ ಹೋದಾಗ, ಚಿತ್ರಮಂದಿರದ ಮೇಲೆ ದಾಳಿ ಮಾಡಿದ ಭಜರಂಗ ದಳದ ಕಾರ್ಯಕರ್ತರು ಅದನ್ನು ಹರಿದು ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ