ಪರಿಷತ್ ಫಲಿತಾಂಶ ಪ್ರಕಟ: ಬಿಜೆಪಿ 12, ಕಾಂಗ್ರೆಸ್ ಗೆ 11 ಸ್ಥಾನ, ಹಾಸನದಲ್ಲಿ ಮಾತ್ರ ಜೆಡಿಎಸ್ ಗೆಲುವು
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ 12 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಎಸ್ ಹಾಸನದಲ್ಲಿ ಮಾತ್ರ ಗೆಲುವು ಸಾಧಿಸಿದೆ.
2015ರ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದ 14 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಕೂಡ ಪರಿಷತ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ.
ಆಡಳಿತಾರೂಢ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ 75 ಸದಸ್ಯ ಬಲದ ಮೇಲ್ಮನೆಯಲ್ಲಿ ಬಹುಮತ ಪಡೆದಿದೆ. ನಾವು 12 ಸ್ಥಾನಗಳನ್ನು ಗೆದ್ದಿದ್ದೇವೆ. ಹಲವು ವರ್ಷಗಳ ನಂತರ ಮೇಲ್ಮನೆಯಲ್ಲಿ ಬಹುಮತ ಪಡೆದಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಂತ್ನಾರಾಯಣ ಮಾತನಾಡಿ, ಪರಿಷತ್ತಿನಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಬಂದಿದ್ದು, ಇದರಿಂದ ಯಾವುದೇ ತೊಂದರೆಯಿಲ್ಲದೆ ಹೊಸ ಕಾರ್ಯಕ್ರಮಗಳು ಮತ್ತು ಕಾನೂನುಗಳನ್ನು ತರಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಇದು ಜನಪರ ಆಡಳಿತ ನೀಡಲು ಸರ್ಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಆರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ದೊಡ್ಡ ಆಘಾತ ಅನುಭವಿಸಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್ ರೇವಣ್ಣ ಅವರು ಹಾಸನ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಬಿಜೆಪಿ ಕೈ ತಪ್ಪಿದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಸ್. ವಿ ರವಿ ಗೆಲುವು ಸಾಧಿಸಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ್ ಹಟ್ಟಿಹೊಳಿ ವಿಜೇತರಾಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಕೊಡಗು ಕ್ಷೇತ್ರದಲ್ಲಿ ನೂರಾ ಐದು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ಇವರಿಗೆ 705 ಮತಗಳು ಬಂದಿದ್ದು, ಕಾಂಗ್ರೆಸ್ ನ ಮಂಥರ್ ಗೌಡ ಅವರಿಗೆ 603 ಮತಗಳು ಸಿಕ್ಕಿವೆ.
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವಿನ ಗರಿ ಮೂಡಿಸಿಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಸೂರಜ್ ರೇವಣ್ಣ, 2247 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ವಿಶ್ವನಾಥ್ 374 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಎ ಶಂಕರ್ 747 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ
ಬಿಜೆಪಿ - 12
ಬೆಂಗಳೂರು ನಗರ - ಗೋಪಿನಾಥ ರೆಡ್ಡಿ
ಮಡಿಕೇರಿ - ಸುಜಾ ಕುಶಾಲಪ್ಪ
ಶಿವಮೊಗ್ಗ - ಡಿ.ಎಸ್.ಅರುಣ್
ಚಿತ್ರದುರ್ಗ - ಕೆಎಸ್ ನವೀನ್
ಬಳ್ಳಾರಿ - ವೈಎಂ ಸತೀಶ್
ಉತ್ತರ ಕನ್ನಡ - ಗಣಪತಿ ಉಳ್ವೇಕರ್
ಚಿಕ್ಕಮಗಳೂರು - ಎಂ.ಕೆ.ಪ್ರಾಣೇಶ್
ಉಡುಪಿ-ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ
ಕಲಬುರಗಿ - ಯಾದಗಿರಿ - ಬಿ ಜಿ ಪಾಟೀಲ್
ಹುಬ್ಬಳ್ಳಿ - ಧಾರವಾಡ - ಪ್ರದೀಪ್ ಶೆಟ್ಟರ್
ವಿಜಯಪುರ-ಬಾಗಲಕೋಟೆ - ಪಿ ಎಚ್ ಪೂಜಾರ್
ಮೈಸೂರು-ಚಾಮರಾಜನಗರ - ರಘು ಕೌಟಿಲ್ಯ
ಕಾಂಗ್ರೆಸ್ - 11
ಬೀದರ್ - ಭೀಮರಾವ್ ಬಿ ಪಾಟೀಲ್
ತುಮಕೂರು - ರಾಜೇಂದ್ರ
ಕೋಲಾರ - ಎಂ.ಎಲ್. ಅನಿಲ್ ಕುಮಾರ್
ವಿಜಯಪುರ-ಬಾಗಲಕೋಟೆ - ಸುನೀಲ್ ಗೌಡ ಪಾಟೀಲ್
ಹುಬ್ಬಳ್ಳಿ - ಧಾರವಾಡ - ಸಲೀಂ ಅಹ್ಮದ್
ರಾಯಚೂರು-ಕೊಪ್ಪಳ - ಶರಣಗೌಡ ಪಾಟೀಲ್ ಬಯ್ಯಾಪುರ
ಮಂಡ್ಯ - ದಿನೇಶ್ ಗೂಳಿಗೌಡ
ಮೈಸೂರು - ಚಾಮರಾಜನಗರ - ಡಿ. ತಿಮ್ಮಯ್ಯ
ಉಡುಪಿ-ದಕ್ಷಿಣ ಕನ್ನಡ - ಮಂಜುನಾಥ್ ಭಂಡಾರಿ
ಬೆಳಗಾವಿ-ಚಿಕ್ಕೋಡಿ ಚನ್ನರಾಜು
ಬೆಂಗಳೂರು ಗ್ರಾಮಾಂತರ - ಎಸ್.ರವಿ
ಜೆಡಿಎಸ್- 1
ಹಾಸನ - ಸೂರಜ್ ರೇವಣ್ಣ
ಪಕ್ಷೇತರ - 1
ಬೆಳಗಾವಿ-ಚಿಕ್ಕೋಡಿ - ಲಖನ್ ಜಾರಕಿಹೊಳಿ