ಕರ್ನಾಟಕ ಜಾನಪದ ವಿವಿಯಲ್ಲಿ ವಿಶ್ವ ಜಾನಪದ ದಿನಾಚರಣೆ

ಮಸ್ತಕವು ಸರಿ ಇದ್ದರೆ ಪುಸ್ತಕವನ್ನು ಸುಟ್ಟು ಬರಿಯಬಹದು ಅಂತಹ ವಿಶೇಷ ಶಕ್ತಿಯನ್ನು ಜನಪದ ಕಲಾವಿದರು ಹೊಂದಿರುತ್ತಾರೆ ಎಂದು ಹಿರಿಯ ಜನಪದ ಕಲಾವಿದರಾದ ಯುಗಧರ್ಮ ರಾಮಣ್ಣ ಹೇಳಿದರು.
ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿವಿಯಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಒಬ್ಬ ಪ್ರತಿಭಾವಂತ ಕಲಾವಿದ ತಯಾರಾಗಲು ತಾಯಿಯೇ ಮೂಲ ಪ್ರೇರಣೆಯಾಗಿದ್ದಾಳೆ. ಜಾನಪದ ಎನ್ನುವುದು ಜನಸಾಮಾನ್ಯರ ಪ್ರತಿನಿತ್ಯದ ಜೀವನ ಶೈಲಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಬಯಲಾಟ ಅಕಾಡಮಿಯ ಅಧ್ಯಕ್ಷರಾದ ಅಜೀತ್ ಬಸಾಪುರ ಮಾತನಾಡಿ ಮನುಷ್ಯನಿಗೆ ಸಾಧಿಸಬೇಕು ಎಂಬ ಛಲ ದೃಢವಾದ ಮನಸ್ಸು ಇದ್ದರೆ ಏನನ್ನಾದರು ಸಾಧಿಸಬಹುದು. ಸರ್ಕಾರ ನನಗೆ ಈ ಸಣ್ಣ ವಯಸ್ಸಿನಲ್ಲಿ ಬಯಲಾಟ ಅಕಾಡೆಮಿಯ ಜವಾಬ್ದಾರಿ ನೀಡಿರುವುದು ಎಲ್ಲ ಹಿರಿಯರು ಹಾಗೂ ಗುರುಗಳ ಆಶೀರ್ವಾದದಿಂದ ಎಂದರು.
ಬಸಾಪುರ, ಜಾನಪದ ಅಕಾಡಮಿಯ ನೂತನ ಸದಸ್ಯ ಬಸವರಾಜ ಗೊಬ್ಬಿ, ಬಂಜಾರ ಭಾಷಾ ಸಂಸ್ಕೃತಿಯ ನೂತನ ಸದಸ್ಯ ಬಸವರಾಜ ಎಸ್.ಜಿ, ಶಂಕರ ಅರ್ಕಸಾಲಿ, ಯುಗಧರ್ಮ ರಾಮಣ್ಣ ಇವರನ್ನು ವಿವಿಯ ವತಿಯಿಂದ ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು ಕಲಾ ಅಧ್ಯಾಪಕರಾದ ಗೋವಿಂದಪ್ಪ ತಳವಾರ, ಅಶೋಕ ಕುರಬರ ದೊಡ್ಡಾಟ ಪದಗಳನ್ನು ಹಾಡಿದರು, ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ನಿರೂಪಿಸಿದರು ಕಾರ್ಯಕ್ರಮದ ಸಂಚಾಲಕರಾದ ಡಾ.ಅರುಣ ಜೋಳದ ಕೂಡ್ಲಗಿ ಅವರು ವಂದಿಸಿದರು.