ಉದ್ಘಾಟನೆಯಾದ ಐದೇ ದಿನಕ್ಕೆ ಸಂಚಾರ ಬಂದ್‌!

ಉದ್ಘಾಟನೆಯಾದ ಐದೇ ದಿನಕ್ಕೆ ಸಂಚಾರ ಬಂದ್‌!

ಬೆಳಗಾವಿ: ಇಲ್ಲಿನ 3ನೇ ರೈಲ್ವೆ ಗೇಟ್‌ಗೆ ನಿರ್ಮಿಸಿದ ಮೇಲ್ಸೇತುವೆಯಲ್ಲಿ ಗುಂಡಿಗಳು ಬಿದ್ದ ಪರಿಣಾಮ, ವಾಹನ ಸಂಚಾರವನ್ನು ಸೋಮವಾರ ಬಂದ್‌ ಮಾಡಲಾಗಿದೆ. ಮೇಲ್ಸೇತುವೆಯನ್ನು ಐದು ದಿನಗಳ ಹಿಂದಷ್ಟೇ ಸಂಚಾರಕ್ಕೆ ಅರ್ಪಿಸಲಾಗಿತ್ತು.

₹35.46 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಮೂರು ವರ್ಷ ತೆಗೆದುಕೊಳ್ಳಲಾಗಿದೆ.

ಇದೇ ಅಕ್ಟೋಬರ್ 12ರಂದು ಉದ್ಘಾಟಿಸಲಾಗಿತ್ತು. ಆದರೆ, ಸೇತುವೆಯ ಮಧ್ಯದಲ್ಲೇ ಗುಂಡಿಗಳು ಬಿದ್ದಿವೆ. ಮುಂಜಾಗ್ರತಾ ಕ್ರಮವಾಗಿ ಜನ ಹಾಗೂ ವಾಹನ ಸಂಚಾರ ನಿಲ್ಲಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ನೀಗದ ಸಮಸ್ಯೆ: ಬೆಳಗಾವಿ- ಖಾನಾಪುರ ಮಾರ್ಗವಾಗಿ ನಿತ್ಯ 40ಕ್ಕೂ ಅಧಿಕ ರೈಲು ಸಂಚರಿಸುತ್ತವೆ. ತಾಲ್ಲೂಕಿನ ಪೀರನವಾಡಿ, ಮಚ್ಛೆ, ಮಜಗಾವಿಯಿಂದ ಬರುವವರು 3ನೇ ರೈಲ್ವೆ ಗೇಟ್‌ ದಾಟಿಯೇ ಟಿಳಕವಾಡಿ, ಅನಗೋಳ, ವಡಗಾವಿ, ಶಹಾಪುರ ಮುಂತಾದ ಪ್ರದೇಶಗಳಿಗೆ ಹೋಗಬೇಕಿತ್ತು. ಪ್ರತಿಬಾರಿ ರೈಲು ಬಂದಾಗ ಕನಿಷ್ಠ 5 ನಿಮಿಷ ವಾಹನ ಸಂಚಾರ ಸ್ಥಗಿತವಾಗುತ್ತದೆ.

ಇದಕ್ಕೆ ಪರಿಹಾರವಾಗಿ 2017ರಲ್ಲಿ ಮೇಲ್ಸೇತುವೆ ಕಾಮಗಾರಿಗೆ ಅನುಮೋದನೆ ಸಿಕ್ಕಿತ್ತು. 2019ರ ಜನವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕೊರೊನಾ ಮತ್ತಿತರ ಕಾರಣಗಳಿಂದ ಕುಂಟುತ್ತ ಸಾಗಿದ ಕಾಮಗಾರಿ ಈಗ ಮುಗಿದಿದೆ. ಬಹು ವರ್ಷಗಳ ಸಂಕಷ್ಟ ನೀಗಿತು ಎಂದು ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದರು. ಅಷ್ಟರಲ್ಲೇ ಕಾಮಗಾರಿ ಕಳಪೆಯಾದ ಕೂಗು ಕೇಳಿಸುತ್ತಿದೆ.

'ಈ ಕಾಮಗಾರಿಗೆ ನೈರುತ್ಯ ರೈಲ್ವೆ ಅಧಿಕಾರಿಗಳೇ ಹೊಣೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಗುತ್ತಿಗೆದಾರರ ಬಾಕಿಯನ್ನು ತಡೆಹಿಡಿಯಬೇಕು' ಎಂದು ಶಾಸಕ ಅಭಯ ಪಾಟೀಲ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.