ಸಿದ್ದರಾಮಯ್ಯನವರೇ ಸ್ಪೀಕರ್ ಸಭೆಗೆ ಹೋಗ್ಬೇಡಿ : ಕಾಂಗ್ರೆಸ್ ಸದಸ್ಯರ ಒತ್ತಾಯ

ಬೆಳಗಾವಿ, ಡಿ.23- ವಿಧಾನಸಭೆಯ ಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆದಿದ್ದ ಸಭೆಗೆ ಕಾಂಗ್ರೆಸ್ ಸದಸ್ಯರು ಹೋಗಬೇಡಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ ಪ್ರಸಂಗ ಇಂದು ನಡೆಯಿತು.
ಬೆಳಗ್ಗೆ ವಿಧೇಯಕ ಮಂಡನೆಯಾದಾಗ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಂದಿದ್ದ ಕರಡನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಸ್ತಾಪಿಸಿದ್ದು, ಕಾವೇರಿದ ಚರ್ಚೆಗೆ ಕಾರಣವಾಯಿತು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಉಂಟಾಗಿ ಸದನದಲ್ಲಿ ಎರಡು ಕಡೆ ವಾಕ್ಸಮರ ನಡೆಯಿತು.
ಆಗ ಕಾಗೇರಿ ಅವರು ಕಡತಗಳ ಪರಿಶೀಲನೆಗಾಗಿ ಸಚಿವ ಮಾಧುಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನು ತಮ್ಮ ಕಚೇರಿಗೆ ಬರುವಂತೆ ಸೂಚನೆ ಕೊಟ್ಟರು. 10 ನಿಮಿಷ ಸದನವನ್ನು ಮುಂದೂಡುತ್ತೇನೆ. ಈ ಕಡತಗಳ ಪರಿಶೀಲನೆ ನಡೆಯಲಿ ನಂತರ ಸದನವನ್ನು ಮುಂದುವರೆಸೋಣ ಎಂದರು.
ಸದನವನ್ನು ಮುಂದೂಡಿ ಸಿದ್ದರಾಮಯ್ಯನವರು ಸಭೆಗೆ ಹೋಗಲು ಮುಂದಾಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಅಂಜಲಿ ನಿಂಬಾಳ್ಕರ್ ಸೇರಿದಂತೆ ಮತ್ತಿತರ ಶಾಸಕರು ಸಭೆಗೆ ಹೋಗಬೇಡಿ, ಕಡತಗಳ ಪರಿಶೀಲನೆ ಮಾಡಬೇಡಿ ಎಂದು ಒತ್ತಾಯಿಸಿದರು.