2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರ ನಿಷೇಧ ಮಸೂದೆ ಸಿದ್ಧಪಡಿಸಲಾಗಿತ್ತು: ಕಾನೂನು ಸಚಿವ ಮಾಧುಸ್ವಾಮಿ

ಬೆಳಗಾವಿ: 2016ರಲ್ಲಿ ಸಮಾಜ ಕಲ್ಯಾಣ ಇಲಾಖೆಯನ್ನು ಕೇಳಿ ಕಾನೂನು ಆಯೋಗ ಒಂದು ಮಸೂದೆಯನ್ನು ಸಿದ್ದಪಡಿಸಿತ್ತು. ಆ ಮಸೂದೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ತಂದು ಸ್ಕ್ರುಟಿನಿಯಾಗಿ ಆಕಸ್ಮಿಕವಾಗಿ ಸಚಿವ ಸಂಪುಟ ಮುಂದೆ ಹೋಗಿರಲಿಲ್ಲ. ಅಂದರೆ ಇದಕ್ಕೆ ಸಿದ್ಧತೆಯನ್ನು 2016ರಲ್ಲಿಯೇ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿತ್ತು.
ಇದರಲ್ಲಿ ಎರಡು ಮೂರು ಅಂಶ ಮಾತ್ರ ಸೇರಿಸಿದ್ದೇವೆ, ಈ ಮಸೂದೆ ಅಸಂವಿಧಾನಿಕ ಎಂದು ಹೇಳಲು ಸಾಧ್ಯವಿಲ್ಲ. ಸಂವಿಧಾನ ವಿಧಿ 25ರಲ್ಲಿ ಸ್ಪಷ್ಟವಾಗಿದೆ, ಮತಾಂತರವಾಗುವುದರಿಂದ ಸಾರ್ವಜನಿಕರ ನಿತ್ಯಜೀವನಕ್ಕೆ ಆಗುತ್ತಿರುವ ಸಮಸ್ಯೆ, ತೊಂದರೆಗಳನ್ನು ನಿಗ್ರಹಿಸಬೇಕೆಂಬುದು ನಮ್ಮ ಕಳಕಳಿಯಾಗಿದೆ ನಾವು ಯಾವ ಧರ್ಮದ ವಿರುದ್ಧವೂ ಇಲ್ಲ. ವಿಧೇಯಕದಲ್ಲಿ ಧರ್ಮಗಳನ್ನು ಗುರಿಯಾಗಿಸಿಲ್ಲ. ಬಲವಂತವಾಗಿ ಮದುವೆಯಾಗುವುದಕ್ಕೆ ಆಕ್ಷೇಪವಿದೆ ಎಂದರು.
''2016ರಲ್ಲೇ ಈ ಬಿಲ್ ಸಿದ್ಧಪಡಿಸಲಾಗಿತ್ತು. ಆದರೆ ಆಕಸ್ಮಿಕವಾಗಿ ಕ್ಯಾಬಿನೆಟ್ ಮುಂದೆ ಬರಲೇ ಇಲ್ಲ. ಅದೇ ಬಿಲ್ ಈಗ ನಾವು ವಿಧಾನಸಭೆಯಲ್ಲಿ ಮಂಡಿಸಿದ್ದೇವೆ. ವಿಧೇಯಕದಲ್ಲಿ ಸ್ವಇಚ್ಛೆಯಿಂದ ಮತಾಂತರ ಆದರೆ ಯಾವ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿದೆ. ಬಲವಂತದ ಮತಾಂತರಕ್ಕೆ ಮಾತ್ರ ಶಿಕ್ಷೆ ಜತೆಗೆ ದಂಡವಿದೆ. ಅದನ್ನು ನಾವು ಈ ಹೊಸ ಬಿಲ್‌ನಲ್ಲಿ ಜಾರಿ ಮಾಡುತ್ತಿದ್ದೇವೆ'' ಎಂದು ಸ್ಪಷ್ಟಪಡಿಸಿದರು.
ಹಿಂದಿನ ಸರ್ಕಾರ ಶಿಕ್ಷೆಯೇನು ಎಂದು ವ್ಯಾಖ್ಯಾನಿಸಿರಲಿಲ್ಲ, ಅದನ್ನು ನಾವು ಇಲ್ಲಿ ವಿವರಿಸಿದ್ದೇವೆ, ಇಲ್ಲಿ ಯಾವ ಧರ್ಮವನ್ನೂ ನಾವು ಗುರಿಯಾಗಿಸಿಲ್ಲ, ಯಾವುದೇ ಒಂದು ಧರ್ಮ ಮೇಲು-ಕೀಳು ಎಂದು ಹೇಳಿಲ್ಲ, ಯಾರೂ ಯಾವ ಧರ್ಮಕ್ಕೆ ಪರಿವರ್ತನೆಯಾಗಬೇಕೆಂದರೆ ಅದು ಸ್ವ ಇಚ್ಛೆಯಿಂದ ಆಗಬೇಕೆಂಬುದಷ್ಟೆ ನಮ್ಮ ಉದ್ದೇಶ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಶೀಲನೆಗೆ ಸೂಚಿಸಿರುವ ದಾಖಲೆ ತೋರಿಸುವಂತೆ ಪಟ್ಟು ಹಿಡಿದರು.