ನನ್ನನ್ನು ಬಂಧಿಸುವ ಉದ್ದೇಶವಾಗಿದ್ದರೆ ಪೊಲೀಸರು ಮನೆಗೆ ಬರುತ್ತಿದ್ದರು: ಅಮೃತಪಾಲ್

ನನ್ನನ್ನು ಬಂಧಿಸುವ ಉದ್ದೇಶವಾಗಿದ್ದರೆ ಪೊಲೀಸರು ಮನೆಗೆ ಬರುತ್ತಿದ್ದರು: ಅಮೃತಪಾಲ್

ಚಂಡೀಗಡ: ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತಪಾಲ್‌ ಸಿಂಗ್ ಅವರದ್ದು ಎನ್ನಲಾದ ಹೊಸ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೊದಲ್ಲಿ ಕಪ್ಪು ಪೇಟ, ಶಾಲು ಧಿರಿಸಿನಲ್ಲಿ ಕಾಣಿಸಿಕೊಂಡ ಅಮೃತಪಾಲ್, ತಮ್ಮ ಸಹಚರರನ್ನು ಬಂಧಿಸಿರುವುದಕ್ಕೆ ಪಂಜಾಬ್ ಪೊಲೀಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಸರ್ಕಾರವು ತಮ್ಮನ್ನು ಬಂಧಿಸುವ ಉದ್ದೇಶ ಹೊಂದಿದ್ದರೆ ನನ್ನ ಮನೆಗೆ ಬರಬಹುದಿತ್ತು. ನಾನು ಶರಣಾಗುತ್ತಿದ್ದೆ ಎಂದು ಹೇಳಿದ್ದಾರೆ.

ಆದರೆ ಲಕ್ಷಾಂತರ ಪೊಲೀಸರ ಪ್ರಯತ್ನವನ್ನು ದೇವರು ವಿಫಲಗೊಳಿಸಿದ್ದಾನೆ ಎಂದು ತಿಳಿಸಿದ್ದಾರೆ.

ಅಮೃತಪಾಲ್ ಶರಣಾಗುವ ಸಾಧ್ಯತೆಯಿದೆ ಎಂಬ ವರದಿಗಳ ನಡುವೆ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿದೆ.

ಅಮೃತಪಾಲ್‌ ಸಿಂಗ್‌ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಆತನ ನೇತೃತ್ವದ ವಾರಿಸ್‌ ಪಂಜಾಬ್‌ ದೇ ಸಂಘಟನೆಯ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಆದರೆ ಅಮೃತಪಾಲ್‌ ತಲೆಮರೆಸಿಕೊಂಡಿದ್ದಾನೆ. ತೀವ್ರ ಹುಡುಕಾಟದ ಪ್ರಯತ್ನದ ನಡುವೆಯೇ ಜಲಂಧರ್‌ನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.