ಹಿಂದಿ ಹೇರಿಕೆ ಕುರಿತು ಬೊಮ್ಮಾಯಿ-ರಿಜ್ವಾನ್ ನಡುವೆ ‘ಭಾಷಣ ಬಡಿದಾಟ’

ಹಿಂದಿ ಹೇರಿಕೆ ಕುರಿತು ಬೊಮ್ಮಾಯಿ-ರಿಜ್ವಾನ್ ನಡುವೆ ‘ಭಾಷಣ ಬಡಿದಾಟ’

ಬೆಂಗಳೂರು, ನ.1- 67ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲೂ ಹಿಂದಿ ಭಾಷೆ ಹೇರಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ರಿಜ್ವಾನ್ ಅರ್ಷದ್ ನಡುವೆ ಭಾಷಣದಲ್ಲಿ ಏಟು-ಎದುರೇಟು ಜರುಗಿತು.

ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ವೇಳೆ ಮೊದಲು ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರ ಹಿಂದಿಯನ್ನು ಬಲವಂತವಾಗಿ ಹೇರುವ ಮೂಲಕ ಕನ್ನಡ ಭಾಷೆಯನ್ನು ಕಡೆಗಣಿಸುತ್ತದೆ. ಇದು ಖಂಡನೀಯ ಎಂದು ಆರೋಪಿಸಿದರು.

ಇದಕ್ಕೆ ಭಾಷಣದಲ್ಲಿ ತಿರುಗೇಟು ನೀಡಿದ ಬೊಮ್ಮಾಯಿ ಅವರು, ಕನ್ನಡ ಪ್ರಾದೇಶಿಕ ಭಾಷೆಯಾದರೂ ಅದೊಂದು ರಾಷ್ಟ್ರೀಯ ಭಾಷೆ. ಯಾವ ಹಂತದಲ್ಲೂ ನಮ್ಮ ಮಾತೃ ಭಾಷೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ರಿಜ್ವಾನ್ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.

ತಮ್ಮ ಭಾಷಣದಲ್ಲಿ ರಿಜ್ವಾನ್ ಅರ್ಷದ್, ಇಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಆದರೆ ಕನ್ನಡಿಗರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿದೆಯೇ ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು. ರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ನಮ್ಮಲ್ಲಿ ಕನ್ನಡ ಜಾಗೃತಿ ಆಗುತ್ತದೆ. ಇದು ಯಾಕೆ ಎಂದು ನಮ್ಮಲ್ಲೇ ನಾವು ಕೇಳಿ ಕೊಳ್ಳಬೇಕು ಎಂದರು.ದೇಶದ ಬಹುತೇಕ ಪರೀಕ್ಷೆಗಳಿಗೆ ಹಿಂದಿ,ಇಂಗ್ಲಿಷ್ ಕಡ್ಡಾಯ ಆಗಿದೆ. ಇದರಿಂದ 60% ಕನ್ನಡಿಗರಿಗೆ ಅನ್ಯಾಯ ಆಗಿದೆ. ರೈಲ್ವೆ, ಸಿಆರ್‍ಪಿಎಸ್ ಸೇರಿದಂತೆ ಅನೇಕ ಸ್ಟಾಪ್ ಸೆಲೆಕ್ಷನ್‍ಗೆ ಹಿಂದಿ, ಇಂಗ್ಲಿಷ್ ಕಡ್ಡಾಯವಾಗಿದೆ. ಹಿಂದಿ ಹೇರಿಕೆ ಖಂಡನೀಯ. ಪ್ರಾದೇಶಿಕ ಭಾಷೆಗಳಿಗೆ ಪ್ರಾಧಾನ್ಯತೆ ಕೊಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಭಾಷಣದಲ್ಲಿ ಅಷ್ಟೇ ನಯವಾಗಿ ತಿರುಗೇಟು ನೀಡಿದ ಬೊಮ್ಮಾಯಿ, ಕನ್ನಡ ಒಂದು ಭಾಷೆಯಾಗದೇ, ಬದುಕು ಆಗಬೇಕು. ನಾವೆಲ್ಲರೂ ಕನ್ನಡಿಗರು ಎಂದು ಹೆಮ್ಮೆಯಿಂದ ಮುನ್ನಡೆಯಬೇಕು. ಎಲ್ಲ ರಾಜ್ಯದಲ್ಲೂ ನಾವು ಮುಂದೆ ಬರಬೇಕು. ನಮ್ಮ ಎಲ್ಲ ಮಕ್ಕಳು ವಿಶ್ವದಲ್ಲೇ ಹೆಸರು ಮಾಡಬೇಕು. ಕನ್ನಡಕ್ಕಾಗಿ ನಾವು ಕಲೀತ್ತೇವೆ, ಕನ್ನಡಕ್ಕಾಗಿ ಬದುಕುತ್ತೇವೆ ಎಂದು ಸಂಕಲ್ಪ ಮಾಡಬೇಕು ಎಂದರು.

ಕನ್ನಡವೇ ನಮ್ಮ ಉಸಿರು, ಕನ್ನಡವೇ ಸರ್ವಸ್ವ, ಪ್ರಧಾನಿಗಳು ಕರ್ನಾಟಕದ ಅಭಿವೃದ್ಧಿಗೂ ಅಪಾರ ಕೊಡುಗೆ ಕೊಟ್ಟಿದ್ದಾರೆ. ಎಲ್ಲ ಭಾಷೆಗಳು ನಮ್ಮ ಮಾತೃಭಾಷೆ, ರಾಷ್ಟ್ರಭಾಷೆ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ಕನ್ನಡ ಭಾಷೆ ಮಾತೃಭಾಷೆನೂ ಹೌದು, ರಾಷ್ಟ್ರ ಭಾಷೆನೂ ಹೌದು ಅದಕ್ಕಾಗಿ ಕನ್ನಡ ಮಾತೃಭಾಷೆ ಜೊತೆಗೆ ರಾಷ್ಟ್ರ ಭಾಷೆಯಾಗಬೇಕು ಎಂದು ಹೇಳಿದರು.