'ನಿನ್ನ ಮೂಳೆ ಮುರಿಯುತ್ತೇನೆ' ಎಂದು ಎಚ್ಚರಿಕೆ ನೀಡಿದ ಟಿಎಂಸಿ ಶಾಸಕ!
ಕೊಲ್ಕತ : ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರ ಒಳಜಗಳವು ಗಂಭೀರ ರೂಪ ತಾಳಿರುವುದು ಬಹಿರಂಗವಾಗಿದೆ. ಟಿಎಂಸಿ ಶಾಸಕರೊಬ್ಬರು ಶುಕ್ರವಾರ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮತ್ತೊಬ್ಬ ಶಾಸಕರಿಗೆ 'ಮೂಳೆ ಮುರಿಯುವುದಾಗಿ' ಎಚ್ಚರಿಕೆ ನೀಡಿರುವ ಸುದ್ದಿ, ಟಿವಿ ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿದೆ.
ಜಿಲ್ಲೆಯ ಹಿರಿಯ ರಾಜಕಾರಣೆ ಎನ್ನಲಾದ ಭರತಪುರ ಶಾಸಕ ಹುಮಾಯೂನ್ ಕಬೀರ್ ಅವರು, 'ರೇಜಿನಗರ ಶಾಸಕ ರಬೀವುಲ್ ಅಲಂ ಚೌಧರಿ ತುಂಬಾ ದರ್ಪ ಮಾಡುತ್ತಿದ್ದಾರೆ. ನನ್ನ ದಾರಿಗೆ ಅಡ್ಡಬರುವ ಧೈರ್ಯ ಮಾಡಿದರೆ ನಾನು ಪಾಠ ಕಲಿಸುತ್ತೇನೆ. ನಾನು ನಿನ್ನ ಮೂಳೆ ಮುರಿಯುತ್ತೇನೆ' ಎಂದು ಅಬ್ಬರಿಸಿದ್ದಾರೆ. ಇದಕ್ಕೆ ಅವರ ಕೆಲವು ಬೆಂಬಲಿಗರು ಚಪ್ಪಾಳೆ ತಟ್ಟಿದ್ದಾರೆ ಎನ್ನಲಾಗಿದೆ.
ಚೌಧರಿ ಅವರಿಗೆ, 'ನಾನು ನೀನು ಇಬ್ಬರೂ ಒಂದೇ ಪಕ್ಷದಲ್ಲಿದ್ದೇವೆ. ನೀರಿನಲ್ಲಿ ವಾಸಿಸುವಾಗ ಮೊಸಳೆಯೊಂದಿಗೆ ಜಗಳಕ್ಕೆ ಹೋಗುವ ಸಾಹಸ ಮಾಡಬೇಡ' ಎಂದೂ ಕಬೀರ್ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಇಬ್ಬರೂ ಶಾಸಕರ ನಡುವೆ ಬಹುಸಮಯದಿಂದ ವಿರಸ ಏರ್ಪಟ್ಟಿದೆ ಎಂದು ಸ್ಥಳೀಯ ಕಾರ್ಯಕರ್ತರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಸೆಕ್ರೆಟರಿ ಜನರಲ್ ಪಾರ್ಥ ಚಟರ್ಜಿ ಅವರು, ಶಾಸಕ ಹುಮಾಯೂನ್ ಕಬೀರ್ ಅವರಿಗೆ ಶೋ-ಕಾಸ್ ನೋಟೀಸ್ ನೀಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಶಾಸಕ ಚೌಧರಿ ಅವರು, 'ನಾನು ಹಿರಿಯ ನಾಯಕರಿಗೆ ತಿಳಿಸಿದ್ದೇನೆ. ಇನ್ನು ಈ ಬಗ್ಗೆ ನಿರ್ಧರಿಸುವುದು ಅವರಿಗೆ ಬಿಟ್ಟಿದ್ದು. ಮಮತಾ ಬ್ಯಾನರ್ಜಿ ಅವರ ಪ್ರಾಮಾಣಿಕ ಸೈನಿಕನಾಗಿ, ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ' ಎಂದಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.