ಕೈಮಗ್ಗ ನೇಕಾರರ ಖಾತೆಗೆ 5,000 ರೂ. ಜಮೆ : ಇಲ್ಲಿದೆ `ನೇಕಾರ ಸಮ್ಮಾನ್ ಯೋಜನೆ' ವೈಶಿಷ್ಟಗಳು
ಬೆಂಗಳೂರು : ನೇಕಾರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನೇಕಾರ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆ ಚಾಲನೆ ನೀಡಿದ್ದಾರೆ. ಕೈಮಗ್ಗ ನೇಕಾರರ ಚಟುವಟಿಕೆಗಳ ಪಾರಂಪರಿಕ ಕಲೆ ಮತ್ತು ಅವರ ಶ್ರಮವನ್ನು ಪರಿಗಣಿಸಿ ಹಾಗೂ ಕೋವಿಡ್-19 ಮಹಾಮಾರಿ ಮತ್ತು ಆರ್ಥಿಕ ಹಿನ್ನೆಡೆಯಿಂದ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ 2020-21 ನೇ ಸಾಲಿನಿಂದ ಅನ್ವಯವಾಗುವಂತೆ, 'ನೇಕಾರ ಸಮ್ಮಾನ್' ಎಂಬ ಹೊಸ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದು, ಇದು ಕೈಮಗ್ಗ ನೇಕಾರರಿಗೆ ಸಹಾಯಕವಾಗಲಿದೆ.
ನೇಕಾರ ಸಮ್ಮಾನ್ ಯೋಜನೆಯ ವೈಶಿಷ್ಟ್ಯಗಳು
- 2021-22 ನೇ ಸಾಲಿನಲ್ಲಿ ರಾಜ್ಯದ ಒಟ್ಟು 49,544 ನೇಕಾರರಿಗೆ ಒಟ್ಟು 9.98 ಕೋಟಿ ರೂ. ಅನ್ನು ಡಿ.ಬಿ.ಟಿ ಮೂಲಕ ವರ್ಗಾಯಿಸಲಾಗಿದೆ.
- 2022-23 ನೇ ಸಾಲಿನಲ್ಲಿ ನೋಂದಾಯಿತ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯ ಆರ್ಥಿಕ ನೆರವನ್ನು 2,000 ರೂ.ದಿಂದ 5,000 ರೂ.ಗೆ ಹೆಚ್ಚಿಸಲಾಗಿದೆ.
- ರಾಜ್ಯದ ಪ್ರತಿ ನೇಕಾರರಿಗೆ 5,000 ರೂ.ದಂತೆ ಒಟ್ಟು 23.43 ಕೋಟಿಯನ್ನು ನೇಕಾರರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಪಾವತಿ ಮೂಲಕ ಜಮಾ ಮಾಡಲಾಗಿದೆ.
- ಇಲ್ಲಿಯವರೆಗೆ ನೇಕಾರ ಸಮ್ಮಾನ್ ಯೋಜನೆಯಡಿಯಲ್ಲಿ ಒಟ್ಟು 46,864 ಅರ್ಜಿಗಳನ್ನು ಪರಿಶೀಲಿಸಿ, ಅನುಮೋದನೆ ನೀಡಲಾಗಿದೆ.