ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ

ದೀಪಕ್ ಚಹಾರ್‌ ಸಿಡಿಸಿದ ಸಿಕ್ಸರ್‌ಗೆ, ಸೆಲ್ಯೂಟ್ ಹೊಡೆದ ರೋಹಿತ್ ಶರ್ಮಾ

ಕೊಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಭಾನುವಾರ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಜಯಗಳಿಸುವ ಮೂಲಕ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನ ವೈಟ್‌ವಾಶ್ ಮಾಡಿದೆ. ಮೂರು ಪಂದ್ಯಗಳ ಸರಣಿಯನ್ನ 3-0 ಅಂತರದಲ್ಲಿ ಗೆದ್ದು ಬೀಗುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಟೀಮ್ ಇಂಡಿಯಾ ಭರ್ಜರಿ ಆರಂಭವನ್ನು ಪಡೆಯಿತು. ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭವನ್ನ ಪಡೆದ್ರೆ, ಸರಣಿಯಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದ ಇಶನ್ ಕಿಶನ್ ಉತ್ತಮ ಸಾಥ್ ನೀಡಿದ್ರು.ಆರಂಭಿಕ ಜೋಡಿಯ ಜೊತೆಯಾಟ ಕೊನೆಗೊಂಡ ಬಳಿಕ ಸೂರ್ಯಕುಮಾರ ಯಾದವ್, ರಿಷಭ್ ಪಂತ್ ಮಿಚೆಲ್‌ ಸ್ಯಾಂಟ್ನರ್ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದ್ರು. ಇದಕ್ಕೂ ಮೊದಲು ಆರಂಭಿಕ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ಕೂಡ ಕೀವಿಸ್ ತಾತ್ಕಾಲಿಕ ನಾಯಕ ಮಿಚೆಲ್ ಸ್ಯಾಂಟ್ನರ್ .ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯವು, ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯನ್ನ ಹೆಚ್ಚಿಸಿತು. ವೆಂಕಟಶ್ ಅಯ್ಯರ್, ಶ್ರೇಯಸ್ ಅಯ್ಯರ್‌ ಉತ್ತಮವಾಗೇ ಬ್ಯಾಟ್‌ ಬೀಸಿದ್ರು, ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗ್ಲಿಲ್ಲ. ಇದರ ನಡುವೆ ಕೊನೆಯ ಓವರ್‌ಗಳಲ್ಲಿ ಎಲ್ಲರ ಹುಬ್ಬೇರಿಸುವಂತೆ ಬ್ಯಾಟ್‌ ಮಾಡಿದ್ದು ಹರ್ಷಲ್ ಪಟೇಲ್ ಮತ್ತು ದೀಪಕ್ ಚಹಾರ್.

ಭಾರತದ ಕ್ರಿಕೆಟಿಗ ದೀಪಕ್ ಚಹಾರ್ ಇಲ್ಲಿಯವರೆಗೆ ಬೌಲರ್ ಆಗಿ ಭಾರತಕ್ಕೆ ಯಶಸ್ಸನ್ನು ಕಂಡಿದ್ದಾರೆ. ಆದರೆ ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ಪ್ರವಾಸದ ಸಮಯದಲ್ಲಿ, ಅವರು ಬ್ಯಾಟ್‌ನೊಂದಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ರು. ದೇಶೀಯ ಟೂರ್ನಿಗಳಲ್ಲಿ ದೀಪಕ್ ಹಲವು ಬಾರಿ ತಮ್ಮ ಬ್ಯಾಟಿಂಗ್ ತಾಕತ್ತು ಪ್ರದರ್ಶಿಸಿದ್ದಾರೆ. ಭಾನುವಾರ (ನವೆಂಬರ್ 21) ಕಿಕ್ಕಿರಿದು ತುಂಬಿದ ಈಡನ್ ಗಾರ್ಡನ್ಸ್‌ ಮೈದಾನದಲ್ಲೂ ದೀಪಕ್ ಮತ್ತೊಮ್ಮೆ ತಾವೊಬ್ಬ ಬೌಲಿಂಗ್ ಆಲ್‌ರೌಂಡರ್ ಎಂಬುದನ್ನ ತೋರಿಸಿಕೊಟ್ಟರು.ಅಂತಿಮ ಓವರ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ದೀಪರ್ ಚಹಾರ್, ಆಯಡಮ್ ಮಿಲ್ನೆ ಬೌಲಿಂಗ್‌ ಅನ್ನು ಧೂಳೀಪಟ ಮಾಡಿದ್ರು. ಮೊದಲ ಮೂರು ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 10 ರನ್ ಗಳಿಸುವುದರೊಂದಿಗೆ ಆತಿಥೇಯ ತಂಡಕ್ಕೆ ಅಂತಿಮ ಓವರ್ ಅದ್ದೂರಿಯಾಗಿ ಪ್ರಾರಂಭವಾಯಿತು

ಇದರ ಬೆನ್ನಲ್ಲೇ ಬ್ಲಾಕ್‌ಬಸ್ಟರ್ ಶಾಟ್ ನಾಲ್ಕನೇ ಎಸೆತದಲ್ಲಿ ಬಂದಿತು. ಮಿಲ್ನೆ ಓಡಿ ಬಂದು ಶಾರ್ಟ್ ಬಾಲ್ ಬೌಲ್ ಮಾಡಿದರು ಆದರೆ ದೀಪಕ್ ಅದನ್ನು ಅಕ್ಷರಶಃ ಎಲ್ಲರೂ ಬೆರಗಾಗುವಂತೆ ಲಾಂಗ್-ಆನ್ ಫೀಲ್ಡರ್ ಮೇಲೆ 95 ಮೀಟರ್ ಸಿಕ್ಸರ್‌ ಸಿಡಿಸಿದ್ರು. ಇದು ನೋಡುಗರನ್ನ ಅಷ್ಟೇ ಬೆರಗುಗೊಳಿಸಿದ್ದಲ್ಲದೆ. ಹಿಟ್‌ಮ್ಯಾನ್, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾರನ್ನೇ ಮೆಚ್ಚಿಸಿತು. ಜೊತೆಗೆ ನಾಯಕ ರೋಹಿತ್ ಶರ್ಮಾ ದೀಪಕ್ ಚಹಾರ್ ಶಾರ್ಟ್ ಬಾಲ್‌ ಅನ್ನು ಸಿಕ್ಸರ್‌ಗೆ ಅಟ್ಟಿದ ರೀತಿ ಕಂಡು ಸೆಲ್ಯೂಟ್ ಮಾಡಿದರು.

ಇನಿಂಗ್ಸ್‌ನ ಅಂತ್ಯಕ್ಕೆ ಕೊನೆಯ ಓವರ್‌ನಲ್ಲಿ 19 ರನ್‌ಗಳ ಅದ್ಭುತ ನೆರವಿನಿಂದ ಭಾರತವು ಏಳು ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ನಾಯಕ ರೋಹಿತ್ 31 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 56 ರನ್ ಗಳಿಸಿದರು ಮತ್ತು ಇಶಾನ್ ಕಿಶನ್ ಅವರ 29 ರನ್‌ಗಳಲ್ಲಿ ಆರು ಬೌಂಡರಿಗಳನ್ನು ಸಿಡಿಸುವ ಮೂಲಕ ತಮ್ಮ ಪಾತ್ರವನ್ನು ವಹಿಸಿದರು. ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್ ಮತ್ತು ದೀಪಕ್ ಚಾಹರ್ ಅವರು ಮಧ್ಯಮ ಓವರ್‌ಗಳಲ್ಲಿ ಸ್ಕೋರ್ ಅನ್ನು ಮುನ್ನಡೆಸಲು ಕೊಡುಗೆಯನ್ನ ನೀಡಿದ್ರು.

ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ನ್ಯೂಜಿಲೆಂಡ್‌ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿ 27ರನ್‌ಗೆ ಮೂರು ವಿಕೆಟ್ ಕಿತ್ತರು. ಆದ್ರೆ ಉಳಿದ ನಾಲ್ವರು ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು ಸಹ ದುಬಾರಿಯಾದರು.

ನ್ಯೂಜಿಲೆಂಡ್ ಅಂತಿಮವಾಗಿ ಭಾರತದ 185ರನ್‌ಗಳ ಗುರಿ ಬೆನ್ನತ್ತಿ 17.2 ಓವರ್‌ಗಳಲ್ಲಿ 111ರನ್‌ಗಳಿಗೆ ಸರ್ವಪತನಗೊಂಡಿತು. ಈ ಗೆಲುವಿನ ಮೂಲಕ ಭಾರತ 3-0 ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆದ್ದುಕೊಂಡಿದೆ.