ಪ್ಲೇ ಆಫ್ ರೇಸ್‌ನಿಂದ ಮಂದಾನ ಪಡೆ ಹೊರಕ್ಕೆ: ಗೆಲುವಿನ ಜೊತೆ ಟೂರ್ನಿ ಕೊನೆಗೊಳಿಸುವ ವಿಶ್ವಾಸ

ಪ್ಲೇ ಆಫ್ ರೇಸ್‌ನಿಂದ ಮಂದಾನ ಪಡೆ ಹೊರಕ್ಕೆ: ಗೆಲುವಿನ ಜೊತೆ ಟೂರ್ನಿ ಕೊನೆಗೊಳಿಸುವ ವಿಶ್ವಾಸ

ಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಂಗಳವಾರ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಲಿದೆ. ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಆರ್ ಸಿಬಿ ತಂಡ ಗೆಲುವಿನ ಮೂಲಕ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಅಭಿಯಾನ ಕೊನೆಗೊಳಿಸುವ ವಿಶ್ವಾಸದಲ್ಲಿದೆ.

ಆರಂಭದ ಐದು ಪಂದ್ಯಗಳಲ್ಲಿ ಸತತವಾಗಿ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್ ಕೊನೆಯ ಎರಡು ಪಂದ್ಯಗಳಲ್ಲಿ ಸೋತಿರುವುದು ತಂಡದ ಆತಂಕವನ್ನು ಹೆಚ್ಚಿಸಿದೆ. ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ವಿರುದ್ಧ ಉತ್ತಮ ರನ್ ರೇಟ್‌ನಲ್ಲಿ ಗೆಲುವು ಸಾಧಿಸಿದರೆ ಮಾತ್ರ ಹರ್ಮನ್‌ಪ್ರೀತ್ ಕೌರ್ ಪಡೆಗೆ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶ ಸಿಗುತ್ತದೆ.

ಒಂದೆಡೆ ಮುಂಬೈ ಇಂಡಿಯನ್ಸ್ ತಾನು ಆಡಿದ ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಆರ್ ಸಿಬಿ ಇದಕ್ಕೆ ತದ್ವಿರುದ್ಧವಾಗಿ ಮೊದಲ ಐದು ಪಂದ್ಯಗಳಲ್ಲಿ ಸೋತು ಕೊನೆಯದಾಗಿ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಅಮೋಘ ಗೆಲುವು ದಾಖಲಿಸಿದೆ.

ಪಂದ್ಯದ ಸಮಯ, ನೇರಪ್ರಸಾರದ ವಿವರ

ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ. ಜಿಯೋ ಸಿನಿಮಾದಲ್ಲಿ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಟಿವಿಯಲ್ಲಿ ವೀಕ್ಷಿಸುವವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಣೆ ಮಾಡಬಹುದು.

ಕಳೆದ ಪಂದ್ಯದಲ್ಲಿ ಕೇವಲ 1 ರನ್‌ಗಳಿಂದ ಶತಕ ವಂಚಿತರಾದ ಸೋಫಿ ಡಿವೈನ್ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ನಾಯಕಿ ಮಂದಾನ ಕೂಡ ಕೊನೆಯ ಗಳಿಗೆಯಲ್ಲಿ ಫಾರ್ಮ್ ಕಂಡುಕೊಂಡಿದ್ದಾರೆ. ಹೀಥರ್ ನೈಟ್, ಕನಿಕಾ ಅಹುಜಾ, ಶ್ರೇಯಾಂಕ ಪಾಟಿಲ್, ಎಲ್ಲಿಸ್ ಪೆರ್ರಿ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

ಡೆಲ್ಲಿ ವಿರುದ್ಧ ಹೀನಾಯವಾಗಿ ಸೋತಿರುವ ಮುಂಬೈ ಇಂಡಿಯನ್ಸ್ ಪಡೆ ಮತ್ತೆ ಗೆಲುವಿನ ಮರಳಲು ಕಾಯುತ್ತಿದೆ. ಎರಡೂ ತಂಡಗಳಿಗೆ ಇದು ಮಹಿಳಾ ಪ್ರೀಮಿಯರ್ ಲೀಗ್‌ನ ಕೊನೆಯ ಲೀಗ್ ಹಂತದ ಪಂದ್ಯಗಳಾಗಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಆರ್​​ಸಿಬಿ : ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಸಹನಾ ಪವಾರ್, ಕೋಮಲ್ ಝಂಜಾದ್, ರೇಣುಕಾ ಠಾಕೂರ್ ಸಿಂಗ್.

ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.