ಬಿಜೆಪಿ ಸರ್ಕಾರ ರೈತರ ಆದಾಯ ವೃದ್ಧಿಗೆ ಕಠಿಬದ್ಧವಾಗಿ ನಡೆಯುತ್ತಿದೆ - ಸಚಿವ ಬಿ.ಸಿ ಪಾಟೀಲ್
ಬೆಂಗಳೂರು : ಬಿಜೆಪಿ ಸರ್ಕಾರ ಕೃಷಿಯಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತರುವ ಮೂಲಕ ರೈತರ ಆದಾಯ ವೃದ್ಧಿಗೆ ಕಠಿಬದ್ಧವಾಗಿ ನಡೆಯುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪುನರುಚ್ಚರಿಸಿದರು.
ಅವರು ಇಂದು ಕೃಷಿ ಇಲಾಖೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ' ಸಂಗಮ ಸಭಾಂಗಣ'ವನ್ನು ಉದ್ಘಾಟಿಸಿ ಮಾತನಾಡಿ, ಈ ಬಾರಿ ಬಜೆಟ್ನಲ್ಲಿ ರೈತರಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ಅಲ್ಲದೇ ಸಾಲದ ಮೊತ್ತವನ್ನು ೫ಲಕ್ಷ ರೂ.ಗೆ ಸರ್ಕಾರ ಏರಿಸಿದೆಅಲ್ಲದೇ ಕೃಷಿಕರಿಗಾಗಿ ಹಲವು ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸಿದೆ.ಜನಸ್ನೇಹಿ ಬಜೆಟ್ ರೂಪಿಸಿರುವ ಬಿಜೆಪಿ ಸರ್ಕಾರ ಕಿರುಧಾನ್ಯಗಳ ವಿಸ್ತೀರ್ಣ ಉತ್ಪಾದನೆ ಹೆಚ್ಚಿಸಲು ರೈತಸಿರಿ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ 10 ಸಾವಿರ.ರೂ.ಗಳಪ್ರೋತ್ಸಾಹ ಧನವನ್ನು ನೀಡುತ್ತಿದೆ.ಸಿರಿಧಾನ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಉತ್ತೇಜನ ನೀಡುತ್ತಿವೆ.ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023-24 ನೇಸಾಲಿನಲ್ಲಿ ಒಟ್ಟಾರೆಯಾಗಿ ,39,031 ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದರು.
ಇದೇ ತಿಂಗಳ ಅಂದರೆ ಫೆ.27 ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ನರೇಂದ್ರ ಮೋದಿ ಅವರು ಶಿವಮೊಗ್ಗದಿಂದಲೇ ರೈತರ ಖಾತೆಗಳಿಗೆ ಜಮಾ ಮಾಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿರುವುದಾಗಿ ಇದೇ ವೇಳೆ ಬಿಸಿಪಿ ತಿಳಿಸಿದರು.
ಕೃಷಿ ಇಲಾಖೆ ರೈತಸ್ನೇಹಿಯಾಗಿದ್ದು, ರೈತರು ಸಂಬಂಧಪಟ್ಟ ತಮ್ಮ ವ್ಯಾಪ್ತಿಯಲ್ಲಿನ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿರಬೇಕು.ಅಲ್ಲದೇ ಕೃಷಿ ವಿಶ್ವವಿದ್ಯಾಲಯಗಳಿಗೂ ಭೇಟಿ ನೀಡಿ ಅಲ್ಲಿನಹೊಸತಳಿಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಸಚಿವರು ಕರೆ ನೀಡಿದರು.
ಈಸಂದರ್ಭದಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖೆಯ ಆಯುಕ್ತ ಶರತ್ ಪಿ, ನಿರ್ದೇಶಕ ಪುತ್ರನ್, ಅಧಿಕಾರಿಗಳಾದ ವೆಂಕಟರಮಣರೆಡ್ಡಿ ಸೇರಿದಂತೆ ಮತ್ತಿತ್ತರು ಉದ್ಘಾಟನಾ ಕಾರ್ಯಕ್ರಮ ವೇಳೆ ಉಪಸ್ಥಿತರಿದ್ದರು.