ನರಗುಂದದ ಘೋರ ಘಟನೆ: ಶಿಕ್ಷಕನಿಂದ ಹತ್ಯೆಯಾದ ವಿದ್ಯಾರ್ಥಿ ಮನೆಯಲ್ಲಿ ಆಕ್ರಂದನ

ನರಗುಂದ: 'ಇರುವ ಒಬ್ಬ ಮೊಮ್ಮಗ ಬಹಳ ಶ್ಯಾನ್ಯಾ ಇದ್ದ... ದಿನಾ ಹೋಗುವಂಗ ಸಾಲಿಗೆ ಹೋಗಿದ್ದ.. ಆದ್ರ ಸೋಮವಾರ ಮುಂಜಾನೆ 11 ಗಂಟೆಯಾಗಿತ್ತ... ಮುತ್ತಪ್ಪ ಮಾಸ್ತರ ನನ್ನ ಮೊಮ್ಮಗನ ಕೊಂದ... ಅನ್ನೋ ಸುದ್ದಿ ಬಂತ... ಯಾಕ ಕೊಂದ ಅನ್ನೋದ ಮಾತ್ರ ಇನ್ನು ಗೊತ್ತಾಗವಲ್ದ...
- ತಾಲ್ಲೂಕಿನ ಹದ್ಲಿಯಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯಿಂದ ಶಾಲೆಯಲ್ಲಿಯೇ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಸಾವನ್ನಪ್ಪಿದ ಭರತ ಬಾರಕೇರನ ಅಜ್ಜಿ ಲಕ್ಷ್ಮವ್ವ ಬಾರಕೇರ ಅವರ ಅಕ್ರಂದನ ಎಲ್ಲರ ಕಣ್ಣುಗಳಲ್ಲಿ ನೀರು ಜಿನುಗುವಂತೆ ಮಾಡಿತ್ತು. ಘಟನೆಯಿಂದಾಗಿ ಅವರ ಮನೆ ಹಾಗೂ ಸುತ್ತಮುತ್ತಲೂ ನೀರವ ಮೌನ ಆವರಿಸಿದ್ದು ಶಾಲೆ ಹಾಗೂ ಇಡೀ ಗ್ರಾಮ ಬಿಕೋ ಎನ್ನುತ್ತಿತ್ತು.
ಘಟನೆ ನಡೆದ ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಳವಾರ ಆರಂಭವಿದ್ದರೂ ಭಯಗೊಂಡ ವಿದ್ಯಾರ್ಥಿಗಳು ಶಾಲೆಯತ್ತ ಸುಳಿದಿಲ್ಲ. ಶಿಕ್ಷಕರು ಮಾತ್ರ ಹಾಜರಾಗಿದ್ದರು. ಶಾಲಾ ಆವರಣದಲ್ಲಿ ಪೊಲೀಸ್ ಪಡೆ ಬೀಡು ಬಿಟ್ಟಿತ್ತು. ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಪೊಲೀಸರು ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಎಲ್ಲ ಶಿಕ್ಷಕರ ಜತೆಗೆ ಚರ್ಚಿಸಿ ಮಾಹಿತಿ ಕಲೆ ಹಾಕುತ್ತಿದ್ದ ದೃಶ್ಯಗಳು ಮಂಗಳವಾರ ಕಂಡುಬಂದವು.
ಮೃತ ವಿದ್ಯಾರ್ಥಿಯ ಅಂತ್ಯ ಸಂಸ್ಕಾರಕ್ಕೆ ಶಿಕ್ಷಕರಾಗಲಿ, ಅಧಿಕಾರಿಗಳಾಗಲಿ ಬರಲಿಲ್ಲ. ವಿದ್ಯಾರ್ಥಿ ಸಾವಿಗೆ ಬೆಲೆ ಇಲ್ಲವೇ? ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದರು.
'ಎದುರಿಗೆ ಆ ಮಾಸ್ತರ ಬಂದ್ರ ಸುಟ್ಟ ಹಾಕತೇವಿ...ಇಲ್ಲಾಂದ್ರ ಪೊಲೀಸರು ಅಂವ್ಗ ಗಲ್ಲು ಶಿಕ್ಷೆ ವಿಧಿಸಬೇಕು' ಎಂದು ಅತಿಥಿ ಶಿಕ್ಷಕನ ವಿರುದ್ಧ ಸ್ಥಳೀಯರು ಕಿಡಿಕಾರಿದರು.
ಮುತ್ತಪ್ಪ ಹಡಗಲಿ ಡಿ.ಇಡಿ ಪದವೀಧರನಾಗಿದ್ದು ಕಳೆದ ಜೂನ್‌ನಿಂದ ಅತಿಥಿ ಶಿಕ್ಷಕನಾಗಿ ಶಾಲೆಗೆ ಸೇರಿದ್ದ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರ ಮೇಲೆ ಏಕೆ ಕ್ರಮ ವಹಿಸಿಲ್ಲ. ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರೊಬ್ಬರು ಆಗ್ರಹಿಸಿದರು.
ಗ್ರಾಮಸ್ಥರು ಹೇಳುವಂತೆ, ಆತನು ಹಿರಿಯರಿಗೆ, ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿರಲಿಲ್ಲ. ಶಾಲೆಗೆ ಬಂದವರ ಜತೆಗೂ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದ. ಎರಡು ತಿಂಗಳ ಹಿಂದೆ ಇದೇ ವಿಚಾರಕ್ಕೆ ತಪ್ಪೊಪ್ಪಿಗೆ ಪತ್ರವನ್ನು ಶಾಲೆಗೆ ಬರೆದುಕೊಟ್ಟಿದ್ದಾನೆ' ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
'ಅತಿಥಿ ಶಿಕ್ಷಕನಿಂದ ಈ ರೀತಿಯ ನಡವಳಿಕೆ ಹಿಂದೆ ಕಂಡು ಬಂದಿಲ್ಲ. ಈಗ ಈ ರೀತಿ ವರ್ತಿಸಿದ್ದಕ್ಕೆ ಕಾರಣ ತಿಳಿದಿಲ್ಲ. ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ' ಎಂದು ಮುಖ್ಯ ಶಿಕ್ಷಕ ಬಿ.ಎಸ್.ಯಾವಗಲ್ ಹೇಳಿದರು.
ಭಯದ ವಾತಾವರಣ ಹೋಗಲಾಡಿಸಲು ಕ್ರಮ
ಮಂಗಳವಾರ ಶಾಲೆ ಆರಂಭವಾಗಿದೆ. ಆರಂಭದಲ್ಲಿ ಕೆಲವು ವಿದ್ಯಾರ್ಥಿಗಳು ಬಂದಿದ್ದರು. ಆದರೆ ಪಾಲಕರು ಮರಳಿ ಕರೆದುಕೊಂಡು ಹೋದರು. ಭಯದ ವಾತಾವರಣ ಹೋಗಲಾಡಿಸಲು ಶೀಘ್ರ ಪಾಲಕರು ಹಾಗೂ ಎಸ್‌ಡಿಎಂಸಿ ಸಭೆ ನಡೆಸಲಾಗುವುದು. ಅತಿಥಿ ಶಿಕ್ಷಕರ ಬಗ್ಗೆಯಾಗಲಿ, ಮುಖ್ಯಶಿಕ್ಷಕ ಹಾಗೂ ಉಳಿದ ಯಾವ ಶಿಕ್ಷಕರ ಬಗ್ಗೆಯೂ ಮೌಖಿಕವಾಗಲಿ, ಲಿಖಿತವಾಗಿಯಾಗಲೀ ಘಟನೆ ನಂತರವೂ ದೂರು ಬಂದಿಲ್ಲ ಎಂದು ನರಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ರಾಜು ತಿಳಿಸಿದ್ದಾರೆ.
ಬಾಲಕನನ್ನು ಹತ್ಯೆ ಮಾಡಿದ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಗೀತಾ ಅವರ ಮೇಲಿನ ಸಿಟ್ಟಿನಿಂದಲೇ ಕೃತ್ಯ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ
-ಶಿವಪ್ರಕಾಶ್ ದೇವರಾಜು, ಎಸ್‌ಪಿ