ಸಾಮಾಜಿಕವಾಗಿ, ನೈತಿಕವಾಗಿ ಒಪ್ಪದ ಸಂಬಂಧ ಲಿವ್‌ ಇನ್‌ ರಿಲೇಷನ್‌ ಎಂದ ಹೈಕೋರ್ಟ್‌- ಜೋಡಿ ಅರ್ಜಿ ವಜಾ

ಚಂಡೀಗಢ: ಲಿವ್‌ ಇನ್‌ ಸಂಬಂಧ ಕಾನೂನುಬದ್ಧ ಎಂದು ಸುಪ್ರೀಂಕೋರ್ಟ್‌ ಸಮ್ಮತಿ ನೀಡಿ ಕೆಲ ವರ್ಷಗಳೇ ಕಳೆದಿವೆ. ಆದರೆ ಇದನ್ನೇ ಮುಂದು ಮಾಡಿಕೊಂಡು ಹೈಕೋರ್ಟ್‌ನಿಂದ ರಕ್ಷಣೆ ಕೋರಿ ಬಂದಿದ್ದ ಜೋಡಿಯೊಂದರ ವಿರುದ್ಧ ಪಂಜಾಬ್‌- ಹರಿಯಾಣ ಹೈಕೋರ್ಟ್‌ ಗರಂ ಆಗಿದ್ದು ಅವರ ಅರ್ಜಿಯನ್ನು ವಜಾ ಮಾಡಿದೆ. 'ಮದುವೆಯಾಗದೇ ಒಟ್ಟಿಗೆ ಬದುಕುವುದನ್ನು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಒಪ್ಪಲಾಗದು' ಎಂದು ಕೋರ್ಟ್‌ ಹೇಳಿದೆ. ಗುಲ್ಜಾಕುಮಾರಿ (19) ಹಾಗೂ ಗುರ್ವಿಂದರ್‌ ಸಿಂಗ್‌ (22) ಎಂಬುವವರು ತಮ್ಮ ಲಿವ್‌ ಇನ್‌ ಸಂಬಂಧದ ಕುರಿತಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಎಸ್‌.ಮದಾನ್‌ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಜೋಡಿ ಕೆಲ ವರ್ಷಗಳಿಂದ ಮದುವೆಯಾಗದೇ ಒಟ್ಟಿಗೇ ನೆಲೆಸಿದ್ದಾರೆ. ಆದರೆ ಲುಧಿಯಾನಾದಲ್ಲಿರುವ ಗುಲ್ಜಾ ಕುಮಾರಿ ಅವರ ಪಾಲಕರು ಇದಕ್ಕೆ ಸಮ್ಮತಿ ನೀಡುತ್ತಿಲ್ಲ. ತಮ್ಮ ಜೀವಕ್ಕೆ ಅಪಾಯವಿದೆ. ಆದ್ದರಿಂದ ತಮಗೆ ರಕ್ಷಣೆ ನೀಡಬೇಕು ಎಂದು ಅರ್ಜಿಯಲ್ಲಿ ಸಲ್ಲಿಸಲಾಗಿತ್ತು. ಇದರಿಂದ ಅಸಮಾಧಾನಗಂಡ ಹೈಕೋರ್ಟ್‌, ಅವರು ಒಟ್ಟಿಗೆ ಇರುವುದನ್ನು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಒಪ್ಪಲಾಗದು. ನಿಮ್ಮ ಈ ಸಂಬಂಧಕ್ಕೆ ಮುದ್ರೆ ಒತ್ತಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ. ನ್ಯಾಯಾಲಯದ ಮುದ್ರೆಯನ್ನು ತೋರಿಸಿ ಮದುವೆಯಾಗುವ ನಿಮ್ಮ ಆಸೆಯನ್ನು ಒಪ್ಪಲಾಗದು ಎಂದ ಕೋರ್ಟ್‌ ಅರ್ಜಿಯನ್ನು ವಜಾ ಮಾಡಿದೆ.

ಸಾಮಾಜಿಕವಾಗಿ, ನೈತಿಕವಾಗಿ ಒಪ್ಪದ ಸಂಬಂಧ ಲಿವ್‌ ಇನ್‌ ರಿಲೇಷನ್‌ ಎಂದ ಹೈಕೋರ್ಟ್‌- ಜೋಡಿ ಅರ್ಜಿ ವಜಾ