ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ಬೆಲೆ ಹೆಚ್ಚಳಕ್ಕೆ ಸಿದ್ದವಾದ ಮಹೀಂದ್ರಾ

ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ಬೆಲೆ ಹೆಚ್ಚಳಕ್ಕೆ ಸಿದ್ದವಾದ ಮಹೀಂದ್ರಾ

ಆಟೋ ಉತ್ಪಾದನಾ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಬಹುತೇಕ ವಾಹನ ಕಂಪನಿಗಳು ತಮ್ಮ ವಾಹನ ಉತ್ಪನ್ನ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿಯು ಕೂಡಾ ಜುಲೈ 1ರಿಂದ ದರ ಹೆಚ್ಚಳಕ್ಕೆ ಸಿದ್ದವಾಗಿದೆ.

ಈ ಮೊದಲು ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಕೋವಿಡ್ ಪರಿಣಾಮ ಬಿಡಿಭಾಗಗಳ ಉತ್ಪಾದನೆಯಲ್ಲಿ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಪಡೆದುಕೊಂಡಿವೆ.

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಹುತೇಕ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ದುಬಾರಿಯಾಗಿವೆ.

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 70 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ ಎನ್ನಲಾಗಿದೆ.

ಹೀಗಾಗಿ ಕಳೆದ ಜನವರಿ ಮತ್ತು ಏಪ್ರಿಲ್‌ನಲ್ಲಿ ದರ ಹೆಚ್ಚಳ ಮಾಡಿದ್ದ ಮಹೀಂದ್ರಾ ಸೇರಿದಂತೆ ಹಲವು ಕಾರು ಕಂಪನಿಗಳು ಇದೀಗ ಜುಲೈ 1ರಿಂದ ಮತ್ತೆ ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ಶೇ.1.50ರಿಂದ ಶೇ.2ರಷ್ಟು ದುಬಾರಿಯಾಗಿವೆ.

ಇನ್ನು ಕೋವಿಡ್‌ನಿಂದಾಗಿ ಇಳಿಕೆಯಾಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಪ್ರಮುಖ ಕಾರು ಕಂಪನಿಗಳು ಒಂದು ಕಡೆಯಲ್ಲಿ ವಾಹನಗಳ ಖರೀದಿ ಮೇಲೆ ಹಲವಾರು ಆಫರ್‌ಗಳನ್ನು ಘೋಷಣೆ ಮಾಡುವುದರ ಜೊತೆಗೆ ಮೂಲ ಬೆಲೆ ಹೆಚ್ಚಳ ಮಾಡುತ್ತಿದ್ದು, ಮಹೀಂದ್ರಾ ಕೂಡಾ ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೂ ಮುನ್ನ ಪ್ರಮುಖ ಕಾರುಗಳ ಮೇಲೆ ವಿಶೇಷ ರಿಯಾಯ್ತಿ ಘೋಷಣೆ ಮಾಡಿದೆ.

ಸತತವಾಗಿ ಕುಸಿತ ಕಂಡಿರುವ ಕಾರು ಮಾರಾಟವನ್ನು ಸುಧಾರಿಸಲು ಮಹೀಂದ್ರಾ ಕಂಪನಿಯು ವಿವಿಧ ಕೊಡುಗೆಗಳೊಂದಿಗೆ ನಗದು ರಿಯಾಯಿತಿಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್ ಬ್ಲ್ಯಾಕ್ ಆಫರ್, ಎಕ್ಸ್‌ಚೆಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಅನ್ವಯವಾಗಲಿದ್ದು, ಆಯ್ದ ಡೀಲರ್ಸ್‌ಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಆಫರ್ ಪಡೆದುಕೊಳ್ಳಬಹುದಾಗಿದೆ. ಆರಂಭಿಕ ಕಾರು ಕೆಯುವಿ 100 ನೆಕ್ಸ್ಟ್ ಮಾದರಿಯಿಂದ ಅಲ್ಟುಲಾಸ್ ಜಿ4 ಮಾದರಿ ತನಕವು ಆಫರ್ ಲಭ್ಯವಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 40 ಸಾವಿರದಿಂದ ರೂ. 2.20 ಲಕ್ಷದ ತನಕ ಆಫರ್ ಪಡೆಯಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಕೆಯುವಿ100 ನೆಕ್ಸ್ಟ್ ಮಾದರಿಯ ಮೇಲೆ ರೂ.40 ಸಾವಿರ ತನಕ ಆಫರ್ ಲಭ್ಯವಿದ್ದಲ್ಲಿ ಅಲ್ಟುರಾಸ್ ಜಿ4 ಮಾದರಿಯ ಮೇಲೆ ರೂ. 2.20 ಲಕ್ಷದ ತನಕ ಆಫರ್ ಲಭ್ಯವಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ300, ಎಕ್ಸ್‌ಯುವಿ500, ಬೊಲೆರೊ, ಮಾರಾಜೋ ಕಾರುಗಳ ಮೇಲೆ ಆಫರ್ ನೀಡುತ್ತಿದೆ.