ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ನವದೆಹಲಿ: 23 ವರ್ಷದ ಮಾಜಿ ಕಿರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಹತ್ಯೆಗೆ ಸಂಬಂಧಿಸಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ ವಜಾ ಮಾಡಿದೆ. ಬಂಧನಕ್ಕೆ ಹೆದರಿ ಸುಶೀಲ್ ಕುಮಾರ್ ಜಾಮೀನು ಕೋರಿ ಮೇ 17 ರಂದು ದೆಹಲಿಯ ರೋಹಿಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ವಿರುದ್ಧದ ತನಿಖೆ ಪಕ್ಷಪಾತದಿಂದ ಕೂಡಿದೆ ಅಲ್ಲದೆ ಇದರಲ್ಲಿ ನನಗೆ ಯಾವ ಸಂಬಂಧವಿಲ್ಲ ಎಂದು ಅವರು ವಾದಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಗದೀಶ್ ಕುಮಾರ್ ಅವರು ಈ ಹಿಂದೆ ಪ್ರಾಸಿಕ್ಯೂಷನ್ ಮತ್ತು ಡಿಫೆನ್ಸ್ ಎರಡರ ವಿವಾದಗಳನ್ನು ದೀರ್ಘವಾಗಿ ಕೇಳಿ ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದರು. ವಿಚಾರಣೆಯ ಸಮಯದಲ್ಲಿ, ಪೊಲೀಸರನ್ನು ಪ್ರತಿನಿಧಿಸುವ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ, ಸುಶೀಲ್ ಕುಮಾರ್ ವಿರುದ್ಧ ಎಲೆಕ್ಟ್ರಾನಿಕ್ ಪುರಾವೆಗಳಿವೆ ಎಂಬ ಕಾರಣಕ್ಕೆ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ವಜಾಗೊಳಿಸಲು ಕೋರಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇನ್ನು ಸುಶೀಲ್ ಕುಮಾರ್ ಅವರ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ.

ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ