ಈ ಇಬ್ಬರಲ್ಲಿ ಈತ ಮಾತ್ರ ಮುಂದಿನ ಟಿ20 ವಿಶ್ವಕಪ್ ಆಡುತ್ತಾನೆ; ವಾಸಿಂ ಜಾಫರ್ ಭವಿಷ್ಯ

ಈ ಇಬ್ಬರಲ್ಲಿ ಈತ ಮಾತ್ರ ಮುಂದಿನ ಟಿ20 ವಿಶ್ವಕಪ್ ಆಡುತ್ತಾನೆ; ವಾಸಿಂ ಜಾಫರ್ ಭವಿಷ್ಯ

ಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ನಂತರ ಇಲ್ಲಿಯವರೆಗೆ ನಡೆದ ಚುಟುಕು ಪಂದ್ಯಗಳ ಸರಣಿಗಳಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ.

ಇನ್ನು ಮುಂಬರುವ 2024ರ ಟಿ20 ವಿಶ್ವಕಪ್‌ನಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಆಡುವ ಬಗ್ಗೆಯೂ ಹಲವು ಅನುಮಾನಗಳಿವೆ.

ಭವಿಷ್ಯದಲ್ಲಿ ಅನುಭವಿ ಆಟಗಾರರಿಗೆ ಶಾಶ್ವತವಾಗಿ ಟಿ20 ತಂಡದ ಬಾಗಿಲು ಮುಚ್ಚಲಾಗಿದೆ ಎಂಬ ಅನುಮಾನಗಳು ಕ್ರಿಕೆಟ್ ವಲಯದಲ್ಲಿ ಮತ್ತು ಅಭಿಮಾಗಳಲ್ಲಿ ಮೂಡಿವೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಿಂದ ಟಿ20 ಕ್ರಿಕೆಟ್‌ನಿಂದ ದೂರ ಉಳಿದಿರುವುದಕ್ಕೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮತ್ತು ಏಕದಿನ ವಿಶ್ವಕಪ್ ಕಾರಣ ಎಂದು ಸ್ವತಃ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.


ರೋಹಿತ್ ಶರ್ಮಾ ಅಂತಿಮ ಟಿ20 ವಿಶ್ವಕಪ್‌ ಆಡಿದ್ದಾರೆ

ಇದೀಗ ವಿರಾಟ್ ಕೊಹ್ಲಿಗೆ ಐಸಿಸಿ ಟೂರ್ನಿಯಲ್ಲಿ ಆಡಲು ಅವಕಾಶ ನೀಡುವ ಸಲುವಾಗಿ ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಭವಿಷ್ಯ ನುಡಿದಿದ್ದಾರೆ.

ಇಬ್ಬರೂ ಇತ್ತೀಚೆಗೆ ನಡೆದ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು ಮತ್ತು ಕೆಲಸ ಹೊರೆ ಇಳಿಸಲು ಇಬ್ಬರಿಗೂ ವಿಶ್ರಾಂತಿ ನೀಡಲಾಗಿತ್ತು ಎಂದು ಭಾರತದ ಕೋಚ್ ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ.

ಪ್ರಸ್ತುತ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ತಮ್ಮ ಅಂತಿಮ ಟಿ20 ವಿಶ್ವಕಪ್‌ ಆಡಿರಬಹುದು ಎಂದು ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಖಂಡಿತವಾಗಿ ಆಡಲಿದ್ದಾರೆ

ಯೂಟ್ಯೂಬ್‌ನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಅವರೊಂದಿಗೆ ಮಾತನಾಡಿದ ವಾಸಿಂ ಜಾಫರ್, ಭಾರತದ ಕ್ರಿಕೆಟ್ ಭವಿಷ್ಯವನ್ನು ನೋಡುವುದಾದರೆ, ಟಿ20 ಆಟವು ಯುವ ಆಟಗಾರರಿಗಾಗಿ ಇರುತ್ತದೆ ಮತ್ತು ಮುಂದಿನ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಆಡುವ ಬಳಗದಲ್ಲಿರುವುದಿಲ್ಲವೆಂದು ಹೇಳಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಖಂಡಿತವಾಗಿ ಆಡಲಿದ್ದಾರೆ. ಆದರೆ, ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ವಿಶ್ವಕಪ್‌ನ ಭಾರತ ತಂಡದಲ್ಲಿ ಇರುವುದಿಲ್ಲ ಎಂದಿದ್ದಾರೆ.

ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡಲ್ಲ

"ಮುಂದಿನ ವಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯಗಳನ್ನು ಆಡಬೇಕಿದೆ, ನಂತರ ಐಪಿಎಲ್ ಮತ್ತು ನಂತರ ಏಕದಿನ ವಿಶ್ವಕಪ್ ಇದೆ. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ".

"ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಬಹುದು ಮತ್ತು ಭವಿಷ್ಯವನ್ನು ನೋಡಿದರೆ, ಟಿ20 ಆಟವು ಯುವಕರಿಗಾಗಿದೆ. ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುವುದನ್ನು ನಾನು ವೈಯಕ್ತಿಕ ದೃಷ್ಟಿಕೋನದಿಂದ ಇಷ್ಟಪಡುವುದಿಲ್ಲ. ಈಗಾಗಲೇ ರೋಹಿತ್ ಶರ್ಮಾ 36 ವರ್ಷ ವಯಸ್ಸಿನವರಾಗಿದ್ದಾರೆ," ಎಂದು ವಾಸಿಂ ಜಾಫರ್ ಹೇಳಿದರು.

"ಏಕದಿನ ವಿಶ್ವಕಪ್ ವರ್ಷದಲ್ಲಿ ಭಾರತೀಯ ಆಯ್ಕೆಗಾರರ ಮೊದಲ ಆದ್ಯತೆ ಎಂದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟಿ20 ಪಂದ್ಯಗಳಿಂದ ದೂರವಿಡುವುದಾಗಿದೆ," ಎಂದು ತಿಳಿಸಿದರು.

ಮಾನಸಿಕವಾಗಿ ತಾಜಾವಾಗಿರುವುದು ಮುಖ್ಯ

"ದೊಡ್ಡ ಟೂರ್ನಿಗಳನ್ನು ಎದುರು ನೋಡುವಾಗ, ಹಿರಿಯ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧರಾಗುವುದು ಮತ್ತು ಮಾನಸಿಕವಾಗಿ ತಾಜಾವಾಗಿರುವುದು ಮುಖ್ಯವಾಗಿದೆ," ಎಂದು ಜಾಫರ್ ಅಭಿಪ್ರಾಯಪಟ್ಟರು.

ಭಾರತದ ತಂಡದಲ್ಲಿರುವ ಯುವ ಪ್ರತಿಭೆಗಳಿಗೆ ಮಾರ್ಗದರ್ಶನಕ್ಕಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಅಗತ್ಯವಿದೆಯೇ ಎಂದು ಕೇಳಿದಾಗ, "ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯುವಕರು ಐಪಿಎಲ್‌ನಲ್ಲಿ ತುಂಬಾ ಕ್ರಿಕೆಟ್ ಆಡಿದ್ದಾರೆ, ಅವರಿಗೆ ಮಧ್ಯದಲ್ಲಿ ಮಾರ್ಗದರ್ಶನ ನೀಡುವವರ ಅಗತ್ಯವಿಲ್ಲ," ಎಂದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಹೇಳಿದರು.