ಭಾರತದ ಪದಕ ಬೇಟೆ: ಚಿನ್ನಕ್ಕೆ ಮುತ್ತಿಟ್ಟ ಕೃಷ್ಣ ನಗರ್

ಟೋಕಿಯೊ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಹಾಂಕಾಂಗ್ ದೇಶದ ಚು ಮನ್ ಕೈ ಅವರನ್ನು 21-17, 16-21, 21-17 ಸೆಟ್ ಗಳಿಂದ ಕೃಷ್ಣ ನಗರ್ ಸೋಲಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಇದುವರೆಗೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡು ಭಾರತ 24ನೇ ಸ್ಥಾನದಲ್ಲಿದೆ. 206 ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿ ಮತ್ತು 124 ಪದಕಗಳನ್ನು ಗಳಿಸುವ ಮೂಲಕ ಗ್ರೇಟ್ ಬ್ರಿಟನ್ ಎರಡನೇ ಸ್ಥಾನದಲ್ಲಿದೆ.
ರಾಜಸ್ತಾನ ಮೂಲದ ಕೃಷ್ಣ ಅವರು ಪದಕ ಗೆಲ್ಲುತ್ತಿದ್ದಂತೆ ಹರ್ಷ ವ್ಯಕ್ತಪಡಿಸುತ್ತಿದ್ದಂತೆ ಅವರ ತಂದೆ ಸುನಿಲ್ ನಗರ್ ಪ್ರತಿಕ್ರಿಯಿಸಿ, ಇಂದು ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಾಗಿದೆ. ಇಡೀ ದೇಶ ಅವರ ಸಾಧನೆಗೆ ಹೆಮ್ಮೆಪಡುತ್ತಿದೆ ಎಂದಿದ್ದಾರೆ.
ಇನ್ನು ರಾಷ್ಟ್ರಪತಿ, ಪ್ರಧಾನಿ ಮೋದಿ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸೇರಿದಂತೆ ಹಲವು ಗಣ್ಯರು ಕೃಷ್ಣ ನಗರ್ ಗೆ ಶುಭ ಕೋರಿದ್ದಾರೆ.
ಇಂದು ಮುಕ್ತಾಯ: ಪ್ಯಾರಾಲಿಂಪಿಕ್ಸ್ 2021 ಆಗಸ್ಟ್ 24ರಂದು ಆರಂಭವಾಗಿದ್ದು ಇಂದು ಮುಕ್ತಾಯವಾಗಲಿದೆ. ಈ ಬಾರಿ 162 ದೇಶಗಳ 4 ಸಾವಿರದ 403 ಸ್ಪರ್ಧಿಗಳು ಭಾಗವಹಿಸಿದ್ದು ಒಟ್ಟು 22 ಕ್ರೀಡೆಗಳಲ್ಲಿ 539 ಪಂದ್ಯಗಳು ಜರುಗಿವೆ. ಭಾರತದಿಂದ 9 ಕ್ರೀಡೆಗಳಲ್ಲಿ 54 ಕ್ರೀಡಾಪಟುಗಳು ಸ್ಪರ್ಧಿಸಿದ್ದಾರೆ.