ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲಂಡ್ ತಂಡ ಪ್ರಕಟ: ತಂಡಕ್ಕೆ ಮರಳಿದ ಸ್ಟಾರ್ ವೇಗಿ

ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು ನ್ಯೂಜಿಲೆಂಡ್ ತಂಡಕ್ಕೆ ಸ್ಟಾರ್ ವೇಗಿ ಕೇಲ್ ಜೇಮಿಸನ್ ವಾಪಾಸಾಗಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿದ್ದ ಬಳಿಕ ತಂಡದಿಂದ ಜೇಮಿಸನ್ ಹೊರಬಿದ್ದಿದ್ದರು.
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಜೇಮಿಸನ್ ನ್ಯೂಜಿಲೆಂಡ್‌ನ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. 16 ಪಂದ್ಯಗಳನ್ನು ಆಡಿರುವ ಅವರು 72 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಪಂದ್ಯದ ವೇಳೆ ಬೆನ್ನುನೋವಿನಿಂದ ಬಳಲುತ್ತಿದ್ದ ಅವರು ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಇನ್ನು ಕೇಲ್ ಜೇಮಿಸನ್ ಬಗ್ಗೆ ನ್ಯೂಜಿಲೆಂಡ್ ತಂಡದ ಹೆಡ್ ಕೋಚ್ ಗ್ಯಾರಿ ಸ್ಟೀಡ್ ಮಾತನಾಡಿದ್ದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಕೇಲ್ ನ್ಯೂಜಿಲೆಂಡ್ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ನಾಟಿಂಗ್‌ಹ್ಯಾಮ್ ಪಂದ್ಯದಲ್ಲಿ ಹೊರಗುಳಿದ ಬಳಿಕ ದೈಹಿಕವಾಗಿ ಪೂರ್ಣ ಸಾಮರ್ಥ್ಯದೊಂದಿಗೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಆಕ್ಲೆಂಡ್ ಪರವಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡಿ ಕ್ರಿಕೆಟ್‌ಗೆ ಮರಳಿದ ನಂತರ ಅವರು ಉತ್ತಮ ಪ್ರಗತಿಯನ್ನು ಕಂಡುಕೊಂಡಿದ್ದಾರೆ" ಎಂದು ಕೋಚ್ ಗ್ಯಾರಿ ಸ್ಟೀಡ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ನ್ಯೂಜಿಲೆಂಡ್ ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಟಾಮ್ ಬ್ಲಂಡೆಲ್ ಮತ್ತು ವೇಗದ ಬೌಲರ್ ಮ್ಯಾಟ್ ಹೆನ್ರಿ ಇಬ್ಬರು ಕೂಡ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ಗಾಯಗೊಂಡಿದ್ದರು. ಆದರೆ ಫೆಬ್ರವರಿ 16-20 ರಿಂದ ಟೌರಂಗದಲ್ಲಿ ಡೇ-ನೈಟ್ ಟೆಸ್ಟ್‌ನೊಂದಿಗೆ ಪ್ರಾರಂಭವಾಗುವ ತವರಿನ ಸರಣಿಗೆ ಈ ಇಬ್ಬರು ಕೂಡ ಸಂಪೂರ್ಣವಾಗಿ ಫಿಟ್ ಆಗುವ ನಿರೀಕ್ಷೆಯಿದೆ. ಹೀಗಾಗಿ ಈ ಇಬ್ಬರು ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ ಸ್ಪಿನ್ನರ್ ಇಶ್ ಸೋಧಿ ಪಾಕಿಸ್ತಾನ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪಾಕ್ ಸರಣಿಯಲ್ಲಿ ಕಿವೀಸ್ ಪರವಾಗಿ 13 ವಿಕೆಟ್ ಪಡೆದು ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆದರೆ ಅಜಾಜ್ ಪಟೇಲ್ ಮತ್ತು ಗ್ಲೆನ್ ಫಿಲಿಪ್ಸ್ 14 ಸದಸ್ಯರ ತಂಡದಿಂದ ಹೊರಬಿದ್ದಿದ್ದಾರೆ.
ನ್ಯೂಜಿಲೆಂಡ್ ತಂಡ: ಟಿಮ್ ಸೌಥಿ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಇಶ್ ಸೋಧಿ, ಬ್ಲೇರ್ ಟಿಕ್ನರ್, ನೀಲ್ ವ್ಯಾಗ್ನರ್, ಕೇನ್ ವಿಲಿಯಮ್ಸನ್, ವಿಲ್ ಯಂಗ್