ಹಾಲಿ ಚಾಂಪಿಯನ್ನರಿಗೆ ಅಗ್ರ ಕ್ರಮಾಂಕವೇ ತಲೆನೋವು ಎಂದ ಆರೋನ್ ಫಿಂಚ್

ಹಾಲಿ ಚಾಂಪಿಯನ್ನರಿಗೆ ಅಗ್ರ ಕ್ರಮಾಂಕವೇ ತಲೆನೋವು ಎಂದ ಆರೋನ್ ಫಿಂಚ್

ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ 16ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ಧವಾಗುತ್ತಿದೆ. ತನ್ನ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಜಿಟಿ ತಂಡ ಮೊದಲ ಪ್ರಯತ್ನದಲ್ಲಿಯೇ ಚಾಂಪಿಯನ್ ಎಸಿಕೊಂಡಿತ್ತು.

ಇದೀಗ ಮತ್ತೊಮ್ಮೆ ಅಂಥಾದ್ಧೇ ಪ್ರದರ್ಶನದ ನಿರೀಕ್ಷೆಯಲ್ಲಿರುವ ಹಾರ್ದಿಕ್ ಬಳಗಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಎಚ್ಚರಿಕೆ ನೀಡಿದ್ದಾರೆ.

ಗುಜರಾತ್ ಟೈಟನ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಆರೋನ್ ಫಿಂಚ್ ಮಾತನಾಡಿದ್ದು ಗುಜರಾತ್ ಟೈಟನ್ಸ್ ತಂಡದಲ್ಲಿ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಸಿಡಿಯದಿದ್ದಲ್ಲಿ ತಂಡಕ್ಕೆ ದೊಡ್ಡ ಹಿನ್ನಡೆಯುಂಟಾಗಲಿದೆ ಎಂದು ಭವಿಚ್ಯ ನುಡಿದಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತಂಡಗಳ ವಿಶ್ಲೇಷಣೆಯಲ್ಲಿ ಭಾಗಿಯಾಗಿದ್ದ ಆರೋನ್ ಫಿಂಚ್ ಗುಜರಾತ್ ಟೈಟನ್ಸ್ ತಂಡ ಅಗ್ರ ಕ್ರಮಾಂಕದಲ್ಲಿ ಹೆಚ್ಚಾಗಿ ಶುಬ್ಮನ್ ಗಿಲ್ ಅವರನ್ನು ನೆಚ್ಚಿಕೊಂಡಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಶುಬ್ಮನ್ ಗಿಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಆರೋನ್ ಫಿಂಚ್ "ಗಿಲ್ ಅದ್ಭುತವಾದ ಆಟಗಾರನಾಗಿದ್ದು ರನ್‌ಗಳನ್ನು ಸುಲಲಿತವಾಗಿ ಗಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದ ಮಧ್ಯಮ ಕ್ರಮಾಂಕವನ್ನು ಕೆಡವುವುದು ಬಹಳ ಕಠಿಣ ಎಂದಿದ್ದಾರೆ.

"ನನ್ನ ಪ್ರಕಾರ ಗುಜರಾತ್ ಟೈಟನ್ಸ್ ತಂಡ ಕಳವಳಗೊಳ್ಳಬೇಕಾದ ಒಂದು ಭಾಗ ಎಂದರೆ ಅದು ಅಗ್ರ ಕ್ರಮಾಂಕ. ಅದು ಕೂಡ ಶುಬ್ಮನ್ ಗಿಲ್ ಸಿಡಿಯದಿದ್ದರೆ ಮಾತ್ರ. ಆ ತಂಡದಲ್ಲಿ ಶುಬ್ಮನ್ ಗಿಲ್ ಪರಿಸ್ಥಿತಿಯನ್ನು ಬದಲಾಯಿಸಬಲ್ಲ ಆಟಗಾರ ಎನಿಸಿದ್ದಾರೆ. ಆತ ಬಹಳ ಸುಲಭವಾಗಿ ರನ್ ಗಳಿಸಬಲ್ಲ. ಆತ ಒಮ್ಮೆ ಲಯವನ್ನು ಕಂಡುಕೊಂಡರೆ ಕಟ್ಟಿಹಾಕುವುದು ಸುಲಭವಿಲ್ಲ. ಆತ ಮಿಂಚಿದರೆ ಉಳಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಲಿದ್ದಾರೆ. ಅವರನ್ನು ಕಟ್ಟಿ ಹಾಕುವುದು ಸುಲಭವಿಲ್ಲ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್.

ಇನ್ನು ಗುಜರಾತ್ ಟೈಟನ್ಸ್ ತಂಡದಲ್ಲಿ ಈ ಬಾರಿಯ ಟೂರ್ನಿಯಲ್ಲಿ ವಿಶೇಷ ಪ್ರದರ್ಶನ ನೀಡಬಹುದಾದ ಆಟಗಾರ ಯಾರು ಎಂಬುದನ್ನು ಆರೋನ್ ಫಿಂಚ್ ಹೆಸರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಡೇಚಿಡ್ ಮಿಲ್ಲರ್ ಪ್ರದರ್ಶನದ ಮೇಲೆ ಈ ಬಾರಿ ಕಣ್ಣಿಡಬಹುದು ಎಂದು ಆರೋನ್ ಫಿಂಚ್ ಅಭಿಪ್ರಾಯವನ್ನು ವ್ಯಕ್ತಪಡಿದ್ದಾರೆ.

ಕಳೆದ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನಲ್ಲಿ ಡೇವಿಡ್ ಮಿಲ್ಲರ್ ಕೂಡ ಬಹಳ ಮಹತ್ವದ ಪಾತ್ರವಹಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಹಲವು ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ತನ್ನ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದರು. ದಕ್ಷಿಣ ಆಫ್ರಿಕಾದ ಈ ಬ್ಯಾಟರ್ ಕಳೆದ ಐಪಿಎಲ್‌ನಲ್ಲಿ ಬರೊಬ್ಬರಿ 68.71ರ ಸರಾಸರಿಯಲ್ಲಿ 481 ರನ್‌ಗಳಿಸಿದ್ದರು.

ಗುಜರಾಥ್ ಟೈಟನ್ಸ್ ಸಂಪೂರ್ಣ ಸ್ಕ್ವಾಡ್ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಉರ್ವಿಲ್ ಪಟೇಲ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ಶುಬ್ಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ರಶೀದ್ ಖಾನ್, ಓಡಿಯನ್ ಸ್ಮಿತ್, ರಾಹುಲ್ ತೆವಾಟಿಯಾ, ಜಯಂತ್ ಯಾದವ್, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಮೋಹಿತ್ ಶರ್ಮಾ, ಜೋಶ್ ಲಿಟಲ್, ಪ್ರದೀಪ್ ಸಾಂಗ್ವಾನ್, ಶಿವಂ ಮಾವಿ, ಯಶ್ ದಯಾಳ್, ದರ್ಶನ್ ನಲ್ಕಂಡೆ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್