ಟಿ20 ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ಶಕೀಬ್ ಅಲ್ ಹಸನ್

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಬುಧವಾರ ಚಟ್ಟೋಗ್ರಾಮ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ಸಾಧನೆ ಮಾಡಿದರು.
ನ್ಯೂಜಿಲೆಂಡ್‌ನ ಟಿಮ್ ಸೌಥಿ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 134 ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದರು, ಆದರೆ ಶಕೀಬ್ ಅಲ್ ಹಸನ್ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಟಿಮ್‌ಸೌಥಿ ದಾಖಲೆಯನ್ನು ಹಿಂದಿಕ್ಕಿದರು. ಶಕೀಬ್ ಸದ್ಯ 114 ಪಂದ್ಯಗಳಲ್ಲಿ 136 ವಿಕೆಟ್ ಪಡೆದುಕೊಂಡಿದ್ದಾರೆ, ಅವರ ಎಕಾನಮಿ ಕೂಡ ಏಳಕ್ಕಿಂತ ಕಡಿಮೆ ಇರುವುದು ವಿಶೇಷವಾಗಿದೆ.
ಶಕೀಬ್ ಅಲ್ ಹಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಮೊದಲನೇ ಸ್ಥಾನ ಸ್ಥಾನದಲ್ಲಿದ್ದಾರೆ. ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಗೆರೊಗ್ರೆ ಡಾಕ್ರೆಲ್ ಅವರ ವಿಕೆಟ್ ಪಡೆಯುವ ಮೂಲಕ ಟಿಮ್ ಸೌಥಿ ದಾಖಲೆಯನ್ನು ಮುರಿದರು. ಶಕೀಬ್ ಅಲ್ ಹಸನ್ ಮಾರಕ ಬೌಲಿಂಗ್ ನೆರವಿನಿಂದ ಬಾಂಗ್ಲಾದೇಶ ಐರ್ಲೆಂಡ್ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ 77 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಿ20 ಸರಣಿ ಗೆದ್ದ ಬಾಂಗ್ಲಾದೇಶ
ಟಿ 20 ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮಳೆಯಿಂದಾಗಿ ಪಂದ್ಯವನ್ನು 17 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಸ್ಫೋಟಕ ಆರಂಭ ಪಡೆಯಿತು. ಆರಂಭಿಕ ಆಟಗಾರ ಲಿಟ್ಟನ್ ದಾಸ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮಿಂಚಿದರು. ಈ ಮೂಲಕ ಬಾಂಗ್ಲಾದೇಶದ ಪರವಾಗಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರ ಎನಿಸಿಕೊಂಡರು.
ಅಂತಿಮವಾಗಿ ಲಿಟ್ಟನ್ ದಾಸ್ 41 ಎಸೆತಗಳಲ್ಲಿ 83 ರನ್ ಗಳಿಸಿದರು. ರೋನಿ ತಾಲುಕ್ದಾರ್ 23 ಎಸೆತಗಳಲ್ಲಿ 44 ರನ್ ಗಳಿಸಿದರು. ನಾಯಕ ಶಕೀಬ್ ಅಲ್ ಹಸನ್ 24 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರು. ಅಂತಿಮವಾಗಿ ಬಾಂಗ್ಲಾದೇಶ 17 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 202 ರನ್ ಗಳಿಸುವ ಮೂಲಕ ಐರ್ಲೆಂಡ್ ಗೆಲುವಿಗೆ ಬೃಹತ್ ಗುರಿ ನೀಡಿತು.
ಶಕೀಬ್ ಅಲ್ ಹಸನ್ ಮಾರಕ ಬೌಲಿಂಗ್
203 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಐಲೆಂಡ್, ಶಕೀಬ್ ಅಲ್ ಹಸನ್ ಮಾರಕ ಬೌಲಿಂಗ್ ದಾಳಿಗೆ ಸಿಕ್ಕಿ ನಲುಗಿತು. ಹ್ಯಾರಿ ಟೆಕ್ಟರ್ 16 ಎಸೆತಗಳಲ್ಲಿ 22 ರನ್ ಗಳಿಸಿದರೆ, ಕರ್ಟಿಸ್ ಕ್ಯಾಂಪರ್ 30 ಎಸೆತಗಳಲ್ಲಿ 50 ರನ್ ಗಳಿಸಿದರು. ಉಳಿದಂತೆ ಯಾವ ಬ್ಯಾಟರ್ ಕೂಡ ರನ್ ಗಳಿಸಲು ಸಾಧ್ಯವಾಗಲಿಲ್ಲ. ಶಕೀಬ್ ಅಲ್ ಹಸನ್ 4 ಓವರ್ ಗಳಲ್ಲಿ 22 ರನ್ ನೀಡಿ 5 ವಿಕೆಟ್ ಪಡೆದರು.
ಟಸ್ಕಿನ್ ಅಹಮದ್ 4 ಓವರ್ ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರು. ಹಸನ್ ಮೊಹಮುದ್ 1 ವಿಕೆಟ್ ಪಡೆದರು. ಅಂತಿಮವಾಗಿ 17 ಓವರ್ ಗಳಲ್ಲಿ 9 ವಿಕೆಟ್ ಪಡೆದುಕೊಂಡು 125 ರನ್ ಗಳಿಸುವ ಮೂಲಕ 77 ರನ್‌ಗಳಿಂದ ಸೋಲನುಭವಿಸಿತು. ಸರಣಿಯ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಬಾಂಗ್ಲಾದೇಶ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಗೆದ್ದುಕೊಂಡಿದೆ.