ಭಾರತದ ವಿರುದ್ಧದ ಆ ಗೆಲುವು ಎಂದಿಗೂ ಸ್ಮರಣೀಯ ಎಂದ ಪಾಕ್ ಕ್ರಿಕೆಟಿಗ

ಭಾರತದ ವಿರುದ್ಧದ ಆ ಗೆಲುವು ಎಂದಿಗೂ ಸ್ಮರಣೀಯ ಎಂದ ಪಾಕ್ ಕ್ರಿಕೆಟಿಗ

ಚಾಂಪಿಯನ್ಸ್ ಟ್ರೋಫಿ 2017 ರ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿದ್ದ ಪಾಕಿಸ್ತಾನ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಇದು ಪಾಕಿಸ್ತಾನದ ಕ್ರಿಕೆಟ್ ಅತಿಹಾಸದಲ್ಲಿ ಸ್ಮರಣೀಯ ಗೆಲುವು ಎಂದು ದಾಖಲಾಗಿದೆ. ಕೆಲವರು ಈ ಸಾಧನೆಯನ್ನು, 1992 ರಲ್ಲಿ ಪಾಕಿಸ್ತಾನ ಏಕದಿನ ವಿಶ್ವಕಪ್ ಗೆದ್ದಿದ್ದಕ್ಕಿಂತ ದೊಡ್ಡ ಸಾಧನೆ ಎಂದು ಪರಿಗಣಿಸಿದ್ದಾರೆ.

ಐಸಿಸಿ ಪಂದ್ಯಾವಳಿಗಳಲ್ಲಿ ಪ್ರತಿ ಬಾರಿ ಭಾರತದ ವಿರುದ್ಧ ಹೀನಾಯವಾಗಿ ಸೋತು ಪಂದ್ಯಾವಳಿಯಿಂದಲೇ ಹೊರಗುಳಿಯುತ್ತಿದ್ದ ಪಾಕಿಸ್ತಾನ, 2017ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ತಲುಪಿದ್ದು ಮಾತ್ರವಲ್ಲದೆ, ಬಲಿಷ್ಠ ಭಾರತ ತಂಡವನ್ನು ಸೋಲಿಸಿ ಇತಿಹಾಸ ಸೃಷ್ಟಿಸಿತ್ತು. ನಾಯಕ ಸರ್ಫರಾಜ್ ಅಹ್ಮದ್ ಅವರು ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದರು, ಇಡೀ ಪಾಕಿಸ್ತಾನಕ್ಕೆ ಅದು ಅತ್ಯಂತ ಸ್ಮರಣೀಯ ವಿಜಯಗಳಲ್ಲಿ ಒಂದಾಗಿದೆ.

ಪಾಕಿಸ್ತಾನ ತಂಡದಲ್ಲಿ ಈಗ ಅನುಭವಿ ಆಟಗಾರರಿದ್ದಾರೆ, ಬಾಬರ್ ಅಜಂ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, 2017ರಲ್ಲಿ ಭಾರತದ ವಿರುದ್ಧ ಗೆದ್ದ ಪಾಕಿಸ್ತಾನ ತಂಡದಲ್ಲಿ ಅನನುಭವಿ, ಯುವ ಆಟಗಾರರೇ ಹೆಚ್ಚಿನದಾಗಿದ್ದರು ಎನ್ನುವ ವಿಷಯವನ್ನು ಸರ್ಫರಾಜ್ ಅಹ್ಮದ್ ನೆನಪು ಮಾಡಿಕೊಂಡಿದ್ದಾರೆ. ಪಾಕಿಸ್ತಾನವು ಐಸಿಸಿ ಟೂರ್ನಮೆಂಟ್ ಫೈನಲ್‌ ಪಂದ್ಯದಲ್ಲಿ ಗೆಲ್ಲುವುದು ಸುಲಭವಾಗಿರಲಿಲ್ಲ ಎಂದು ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಗೆದ್ದದ್ದು ಮಹತ್ವದ ಸಾಧನೆ

"ಚಾಂಪಿಯನ್ಸ್ ಟ್ರೋಫಿ ಗೆದ್ದದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತದ ವಿರುದ್ಧ ಫೈನಲ್ ಪಂದ್ಯವನ್ನು ಗೆಲ್ಲುವುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದು ಸಾಮಾನ್ಯ ಪಂದ್ಯವಾಗಿದ್ದರೆ, ಇದು ದೊಡ್ಡ ವಿಷಯವಾಗುತ್ತಿರಲಿಲ್ಲ. ಅದಕ್ಕೂ ಮುನ್ನ ಭಾರತದ ವಿರುದ್ಧ ಗೆದ್ದಿದ್ದರೂ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂತಹ ಬಲಿಷ್ಠ ತಂಡದ ವಿರುದ್ಧ ಗೆಲ್ಲುವುದು, ನಂಬಲಾಗದ ಸಂಗತಿಯಾಗಿದೆ" ಎಂದು ಸರ್ಫರಾಜ್ ದಿ ನಾದಿರ್ ಅಲಿ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.

ಅಂದಿನ ಭಾರತ ತಂಡದಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ ಇದ್ದರು, ಆದರೆ ನಮ್ಮ ತಂಡದಲ್ಲಿ ಇನ್ನು ಅನುಭವವೇ ಇಲ್ಲದ ಹುಡುಗರು ಇದ್ದರು. ಬಾಬರ್ ಅಜಮ್, ಹಸನ್ ಅಲಿ, ಶಾದಾಬ್ ಖಾನ್ ಫಹೀಮ್ ಅಶ್ರಫ್, ಎಲ್ಲರೂ ಯುವ ಆಟಗಾರರು, ಭಾರತ ತಂಡದ ಜೊತೆ ಹೋಲಿಕೆ ಮಾಡಿ ನೋಡಿದರೆ, ನಾವು ಏನೂ ಅಲ್ಲ. ಮೊಹಮ್ಮದ್ ಹಫೀಜ್ ಮತ್ತು ಶೋಯೆಬ್ ಮಲಿಕ್ ಬಿಟ್ಟರೆ ಉಳಿದ ಎಲ್ಲಾ ಆಟಗಾರರಿಗೆ ಅನುಭವವೇ ಇರಲಿಲ್ಲ ಎಂದು ಹೇಳಿದ್ದಾರೆ.

ಏಳು ಬೀಳುಗಳನ್ನು ಕಂಡು ಫೈನಲ್‌ಗೆ ಪ್ರವೇಶ

ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಪ್ರವೇಶ ಪಡೆಯಲು ಪಾಕಿಸ್ತಾನ ಸಾಕಷ್ಟು ಏಳು ಬೀಳುಗಳನ್ನು ಕಂಡಿತ್ತು. ಭಾರತದ ವಿರುದ್ಧ 124 ರನ್‌ ಗಳಿಂದ ಸೋತ ಬಳಿಕ, ಪಂದ್ಯಾವಳಿಯಲ್ಲಿ ಜೀವಂತವಾಗಿರಲು ದಕ್ಷಿಣ ಆಫ್ರಿಕಾವನ್ನು 19 ರನ್‌ಗಳಿಂದ ಸೋಲಿಸಿತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ದ ಗೆಲ್ಲಲು 237 ರನ್‌ಗಳನ್ನು ಬೆನ್ನಟ್ಟಿದ ಪಾಕಿಸ್ತಾನವು 162 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಸರ್ಫರಾಜ್ ಮತ್ತು ಮೊಹಮ್ಮದ್ ಅಮೀರ್ ಅದ್ಭುತ ಜೊತೆಯಾಟದ ಮೂಲಕ 3 ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

"ನಾನು ನಾಯಕನಾಗಿ ನನ್ನ ಮೊದಲ ಪಂದ್ಯವನ್ನು ಆಡಿದಾಗ, ನಾನು ಅಪಾರ ಒತ್ತಡದಲ್ಲಿದ್ದೆ. ಪರಿಣಾಮಗಳ ಬಗ್ಗೆ ತಿಳಿದಿರಲಿಲ್ಲ. ಆಟಗಾರನಾಗಿ ಆಡುವುದು ವಿಭಿನ್ನವಾಗಿದೆ. ನಾವು ಫೈನಲ್ ತಲುಪಿದಾಗ, ಹಡಲ್‌ನಲ್ಲಿ ನಾನು ಆಟಗಾರರಿಗೆ ಒಂದು ವಿಷಯ ಹೇಳಿದ್ದೇನೆ. ನೋಡಿ, ನಾವು ಆಡಿದ ರೀತಿಯ ಕ್ರಿಕೆಟ್, ಪಾಕಿಸ್ತಾನದ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಪುನರಾಗಮನವನ್ನು ಅಪರೂಪವಾಗಿ ನೋಡಿದ್ದೇವೆ, ಇಂದು ನಾವು ನಮ್ಮ 100 ಪ್ರತಿಶತ ಪ್ರಯತ್ನ ಮಾಡಿದರೆ, ಈ ಪಂದ್ಯವು ನಮ್ಮ ಹಿಡಿತದಲ್ಲಿರುತ್ತದೆ,"ಎಂದು ಸರ್ಫರಾಜ್ ಆಟಗಾರರಿಗೆ ಹೇಳಿದ್ದರಂತೆ.