ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯ ಟಾಪರ್‌ ಆರ್.ಕೆ.ಶಿಶಿರ್ ಗೆ 1 ಲಕ್ಷ ರೂ. ಪ್ರತಿಭಾ ಪುರಸ್ಕಾರ ನೀಡಿದ ಹೆಚ್‌ಡಿಕೆ

ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯ ಟಾಪರ್‌ ಆರ್.ಕೆ.ಶಿಶಿರ್ ಗೆ 1 ಲಕ್ಷ ರೂ. ಪ್ರತಿಭಾ ಪುರಸ್ಕಾರ ನೀಡಿದ ಹೆಚ್‌ಡಿಕೆ

ಬೆಂಗಳೂರು : ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ರಾಂಕ್ ಗಳಿಸಿದ ಬೆಂಗಳೂರಿನ ಕೃಷ್ಣಕುಮಾರ್ ಅವರ ಪುತ್ರ ಆರ್.ಕೆ.ಶಿಶಿರ್ ಅವರನ್ನು ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಕಚೇರಿಯಲ್ಲಿ ಗೌರವಿಸಿ ಆರ್.ಕೆ.ಶಿಶಿರ್ ಅವರಿಗೆ 1 ಲಕ್ಷ ರೂ.

ಪ್ರತಿಭಾ ಪುರಸ್ಕಾರವನ್ನು ನೀಡಿದ್ದಾರೆ.
ಸೆಪ್ಟೆಂಬರ್ 11 ರಂದು ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಪೈಕಿ ಕರ್ನಾಟಕದ ಹುಡುಗ ಶಿಶಿರ್‌ ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಫಸ್ಟ್‌ ರ‍್ಯಾಂಕ್‌ ಪಡೆದುಕೊಂಡರು. ಕರ್ನಾಟಕ ಸಿಇಟಿ ಪರೀಕ್ಷೆಯ ಫಾರ್ಮಸಿ ಪ್ರವೇಶ ಪರೀಕ್ಷೆ ಹಾಗೂ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸಹ ಶಿಶಿರ್‌ ಪ್ರಥಮ ಸ್ಥಾನ ಗಳಿಸಿದ್ದನು.

ಬೆಂಗಳೂರಿನ ಹುಡುಗ ಶಿಶಿರ್‌ಗೆ ಓದಿನಲ್ಲಿ ಹೆಚ್ಚು ಶ್ರದ್ಧೆ ಇದೆ. ಆದರೂ, ತಾನು ಈ ಪರೀಕ್ಷೆಗಾಗಿ ಅಧ್ಯಯನಕ್ಕಾಗಿ ಸಾಮಾನ್ಯದಂತೆ ವಾರಕ್ಕೆ 12 - 14 ಗಂಟೆಗಳ ಕಾಲ ಮೀಸಲಿಡುತ್ತಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗೂ, ಇಂತಹ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಗಂಟೆಗಳ ಲೆಕ್ಕಕ್ಕಿಂತ ಅಭ್ಯಾಸದ ಗುಣಮಟ್ಟ ಮುಖ್ಯವಾಗಿದೆ ಎಂದೂ ಶಿಶಿರ್‌ ಹೇಳಿಕೊಂಡಿದ್ದಾನೆ. ಬೆಂಗಳೂರಿನ ವಿದ್ಯಾರಣ್ಯಪುರದ ನಾರಾಯಣ ಇ - ಟೆಕ್ನೋ ಶಾಲೆಯ ವಿದ್ಯಾರ್ಥಿ ಶಿಶಿರ್‌, ಪ್ರತಿ ಗಂಟೆಗಳ ಅಧ್ಯಯನದ ಬಳಿಕ ಚಿಕ್ಕ ಬ್ರೇಕ್‌ ಅನ್ನೂ ತೆಗೆದುಕೊಳ್ಳುತ್ತಿದ್ದರಂತೆ. ಅಲ್ಲದೆ, ಆಗಾಗ್ಗೆ ಬ್ರೇಕ್‌ ತೆಗೆದುಕೊಳ್ಳುವುದು ಎಂದರೆ ಏಕಾಗ್ರತೆಯ ಕೊರತೆ ಎಂದರ್ಥವಲ್ಲ. ಇದು ನನ್ನನ್ನು ಯಶಸ್ವಿಯಾಗಿಸಿದೆ ಎಮದೂ ಶಿಶಿರ್‌ ತಿಳಿಸಿದ್ದಾರೆ. ಇನ್ನು, ಜೆಇಇ ಪರೀಕ್ಷೆಗಾಗಿ ಕಳೆದ 2 ವರ್ಷಗಳಿಂದ ಅಧ್ಯಯನ ಮಾಡುತ್ತಿರುವುದಾಗಿಯೂ ಶಿಶಿರ್‌ ಹೇಳಿದ್ದಾನೆ.

ಕರ್ನಾಟಕ ಸಿಇಟಿಯಲ್ಲೂ ಟಾಪರ್..!
ಈ ಮಧ್ಯೆ, ಶಿಶಿರ್‌ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಮಾತ್ರವಲ್ಲ, ಕರ್ನಾಟಕ ಸಿಇಟಿಯ ಫಾರ್ಮಾ ವಿಭಾಗದಲ್ಲೂ ಪ್ರಥಮ ಸ್ಥಾನ ಗಳಿಸಿದ್ದನು. ಕರ್ನಾಟಕ ಸಿಇಟಿಯಲ್ಲಿ ಅವರು 180 ಅಂಕಗಳ ಪೈಕಿ 178 ಅಂಕಗಳನ್ನು ಗಳಿಸಿದ್ದರು. ಹಾಗೂ ಸಿಬಿಎಸ್‌ಇಯ 12ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ಶೇ. 97. 9 ರಷ್ಟು ಅಂಕ ಗಳಿಸಿದ್ದನು.
ಇನ್ನು, ಐಐಟಿ ಬಾಂಬೆ ಪ್ರಕಟಿಸಿರುವ ಫಲಿತಾಂಶದ ಪ್ರಕಾರ, ದೇಶಕ್ಕೆ ನಂ. 1 ರ‍್ಯಾಂಕ್‌ ಗಳಿಸಿರುವ ಶಿಶಿರ್‌, 360 ಅಂಕಗಳ ಪೈಕಿ 314 ಅಂಕಗಳನ್ನು ಗಳಿಸಿದ್ದಾನೆ. ಮಹಿಳೆಯರ ಪೈಕಿ ತನಿಷ್ಕಾ ಕಬ್ರಾ ಪ್ರಥಮ ಸ್ಥಾನ ಗಳಿಸಿದ್ದು, ಆಕೆ 360 ಅಂಕಗಳ ಪೈಕಿ 277 ಅಂಕ ಪಡೆದುಕೊಂಡಿದ್ದಾಳೆ. ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಹಾಜರಿದ್ದರು. ಆದರೆ, ಈ ಪೈಕಿ 40 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದಾರೆ.

ಪ್ರಥಮ ಸ್ಥಾನ ಗಳಿಸಿದ ಶಿಶಿರ್‌ಗೆ ಸಿಎಂ ಬೊಮ್ಮಾಯಿ ಅಭಿನಂದನೆ
ಬೆಂಗಳೂರಿನ ಹುಡುಗ ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ''ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕರುನಾಡಿನ ಕೀರ್ತಿ ಹೆಚ್ಚಿಸಿದ ಶಿಶಿರ್ ಆರ್. ಕೆ‌. ಅವರಿಗೆ ಹಾರ್ದಿಕ ಅಭಿನಂದನೆಗಳು. ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.