ಬಾಂಗ್ಲಾದೇಶ-ಜಿಂಬಾಬ್ವೆ ಟೆಸ್ಟ್ ಪಂದ್ಯದ ವೇಳೆ ಆಟಗಾರರ ನಡುವೆ ಜಟಾಪಟಿ

ಬಾಂಗ್ಲಾದೇಶ-ಜಿಂಬಾಬ್ವೆ ಟೆಸ್ಟ್ ಪಂದ್ಯದ ವೇಳೆ ಆಟಗಾರರ ನಡುವೆ ಜಟಾಪಟಿ

ಹರಾರೆ: ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವಣ ಟೆಸ್ಟ್ ಸರಣಿ ರೋಚಕತೆಯಿಂದ ಕೂಡಿರಲ್ಲ ಎಂದು ಅಂದುಕೊಂಡಿದ್ದರೆ ತಪ್ಪಾದಿತು. ಯಾಕೆಂದರೆ ಇತ್ತಂಡಗಳ ಆಟಗಾರರು ಪರಸ್ಪರ ಜಗಳಕ್ಕಿಳಿದಿರುವುದು ಪಂದ್ಯದ ಬಿಸಿ ಬಿಸಿ ವಾತಾವರಣಕ್ಕೆ ಸಾಕ್ಷಿಯಾಗಿದೆ.

ಏನಿದು ಘಟನೆ?
ಜಿಂಬಾಬ್ವೆ ಪ್ರವಾಸದಲ್ಲಿರುವ ಬಾಂಗ್ಲಾದೇಶ ಹರಾರೆಯ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತಿದೆ.

ಮೆಹಿದಿ ಹಸನ್ (82ಕ್ಕೆ 5 ವಿಕೆಟ್) ದಾಳಿಗೆ ಕುಸಿತ ಕಂಡ ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 276 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಉತ್ತರ ನೀಡಿದ ಬಾಂಗ್ಲಾದೇಶ ಆರಂಭಿಕ ಆಘಾತ ಅನುಭವಿಸಿದರೂ ಕೆಳ ಕ್ರಮಾಂಕದಲ್ಲಿ ಲಿಟನ್ ದಾಸ್ (95), ಮಹಮ್ಮದುಲ್ಲಾ (150*) ಹಾಗೂ ತಸ್ಕಿನ್ ಅಹ್ಮದ್ (75) ದಿಟ್ಟ ಹೋರಾಟದ ನೆರವಿನಿಂದ ಪ್ರತ್ಯುತ್ತರವನ್ನು ನೀಡಿತ್ತು.

ಈ ಮಧ್ಯೆ 10ನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದ ತಸ್ಕಿನ್ ಅಹ್ಮದ್ ಹಾಗೂ ಜಿಂಬಾಬ್ವೆ ವೇಗಿ ಮುಜರಬಾನಿ ನೇರ ಜಟಾಪಟಿಗಿಳಿದರು.

ಪಂದ್ಯದ 85ನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಮುಜರಬಾನಿ ದಾಳಿಯನ್ನು ನಿರ್ಲಕ್ಷಿಸಿದ ತಸ್ಕಿನ್, ಪಿಚ್‌ನಲ್ಲಿ ಸ್ಟೆಪ್ ಹಾಕಿದರು. ಇದು ಮುಜರಬಾನಿ ಕೋಪಕ್ಕೆ ಕಾರಣವಾಯಿತು.

ಬ್ಯಾಟ್ಸ್‌ಮನ್ ಬಳಿ ತೆರಳಿ ಗುರುಗುಟ್ಟಿ ನೋಡಿದರು. ಅಲ್ಲದೆ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಅಂಪೈರ್ ಮಧ್ಯ ಪ್ರವೇಶದ ಬಳಿಕ ವಾತಾವರಣ ಶಾಂತವಾಯಿತು.