ರಾಹುಲ್‌ಗಿಂತ ಶುಭಮನ್‌ಗೆ ಅವಕಾಶ ಕೊಡಲಿ: ರವಿ ಶಾಸ್ತ್ರಿ ಅಭಿಪ್ರಾಯ

ರಾಹುಲ್‌ಗಿಂತ ಶುಭಮನ್‌ಗೆ ಅವಕಾಶ ಕೊಡಲಿ: ರವಿ ಶಾಸ್ತ್ರಿ ಅಭಿಪ್ರಾಯ

ನಾಗಪುರ (ಪಿಟಿಐ): ತಂಡದ ಉಪನಾಯಕರಾದ ಕಾರಣಕ್ಕಾಗಿ ತಂಡದಲ್ಲಿ ಸ್ಥಾನ ನೀಡಲೇಬೇಕಾದ ಅನಿವಾರ್ಯತೆ ಇರಬಾರದು. ಅವರ ಪ್ರದರ್ಶನಕ್ಕೆ ಅನುಗುಣವಾಗಿ ಅವಕಾಶ ನೀಡಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಬಾರ್ಡರ್‌-ಗಾವಸ್ಕರ್ ಟೆಸ್ಟ್ ಸರಣಿಯ ಮುನ್ನಾದಿನವಾದ ಬುಧವಾರ 'ಐಸಿಸಿ ರಿವೀವ್‌'ನಲ್ಲಿ ಮಾತನಾಡಿದ ಅವರು, 'ಉತ್ತಮ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ ಅವರಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಲಭಿಸಬೇಕು.

ಕೆ.ಎಲ್. ರಾಹುಲ್‌ಗೆ ಉಪನಾಯಕನೆಂಬ ಕಾರಣಕ್ಕೆ ಸ್ಥಾನ ನೀಡುವುದಕ್ಕಿಂತ ಸಾಧನೆ ಮತ್ತು ಫಾರ್ಮ್‌ನ ಆಧಾರದಲ್ಲಿ ಅವಕಾಶ ಕೊಡಬೇಕು' ಎಂದರು.

'ಇತ್ತೀಚೆಗೆ ನಿಗದಿಯ ಓವರ್‌ಗಳ ಪಂದ್ಯಗಳಲ್ಲಿ ಶುಭಮನ್ ಅಮೋಘ ಆಟವಾಡಿದ್ದಾರೆ. ಆದ್ದರಿಂದ ಅವರನ್ನೇ ಪರಿಗಣಿಸುವುದು ಉಚಿತ. ಆದರೆ ಈ ನಿರ್ಧಾರ ತಂಡದ ವ್ಯವಸ್ಥಾಪಕ ಸಮಿತಿಯ ಮೇಲೆ ಬಿಟ್ಟಿದ್ದು' ಎಂದರು.

'ಟೆಸ್ಟ್‌ಗೆ ಪದಾರ್ಪಣೆ ಮಾಡುತ್ತಿರುವ ಸೂರ್ಯಕುಮಾರ್ ಯಾದವ್ ಐದನೇ ಕ್ರಮಾಂಕಕ್ಕೆ ಸೂಕ್ತ' ಎಂದೂ ಶಾಸ್ತ್ರಿ ಹೇಳಿದ್ದಾರೆ.