ಚೆಕ್ ಬೌನ್ಸ್ ಪ್ರಕರಣ: ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ ಜಮನಾಳ ಜೈಲು ಪಾಲು

ಚೆಕ್ ಬೌನ್ಸ್ ಪ್ರಕರಣ: ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ ಜಮನಾಳ ಜೈಲು ಪಾಲು

ಧಾರವಾಡ: ಹುಬ್ಬಳ್ಳಿ,  ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡನಾಗಿದ್ದ ಶ್ರೀಕಾಂತ ತಿರಕಪ್ಪ ಜಮನಾಳಗೆ  ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಧಾರವಾಡ ಜಿಲ್ಲಾ  ನ್ಯಾಯಾಲಯ ಆದೇಶ ಹೊರಡಿಸಿದೆ.

ಮಂಜುನಾಥ ಗುರುಸಂಗಪ್ಪ ದನ್ನೂರ ಎಂಬುವರು ಶ್ರೀಕಾಂತ  ಜಮನಾಳ ವಿರುದ್ಧ 2018ರಲ್ಲಿ 
ದೂರು ಸಲ್ಲಿಸಿದ್ದರು. 
ಈ ಹಿಂದೆ ಜಮನಾಳ,  ಪಿರ್ಯಾದಿದಾರರಿಂದ ಐದು ಲಕ್ಷ ಹಣ ಪಡೆದುಕೊಂಡು ಮರಳಿ‌ ನೀಡದೇ ಚೆಕ್ ಕೊಟಿದ್ದರು. ಅಲ್ಲದೇ, ಚೆಕ್ಕನ್ನು ಬ್ಯಾಂಕನಲ್ಲಿ ಹಾಕಿದಾಗ ಚೆಕ್ ಬೌನ್ಸ್‌ ಆಗಿದ್ದು ಪಿರ್ಯಾದಿದಾರರು ಆರೋಪಿತನ ಮೇಲೆ ನ್ಯಾಯಾಲಯದಲ್ಲಿ ದೂರು‌ ದಾಖಲಿಸಿದ್ದರು. 2019 ರಲ್ಲಿ ಜಮನಾಳ, ಪಿರ್ಯಾದಿದಾರರಿಗೆ ಐದು ಲಕ್ಷ ಹಣ ಕೊಡುವುದಾಗಿ ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡಿದ್ದ. 
ಆದರೆ, ಇಲ್ಲಿಯವರೆಗೆ ಹಣ ನೀಡದೆ ತಲೆ ಮರೆಸಿಕೊಂಡಿದ್ದ ಆರೋಪಿ ಶ್ರೀಕಾಂತ ಜಮನಾಳ ವಿರುದ್ಧ ನ್ಯಾಯಾಲಯವು ಆರೋಪಿತನ‌ ಪತ್ತೆಗಾಗಿ ದಸ್ತಗಿರಿ ವಾರಂಟ್ ಹೊರಡಿಸಿತ್ತು. 
ಧಾರವಾಡದ ಉಪನಗರ ಪೊಲೀಸರು ಶುಕ್ರವಾರ ಆರೋಪಿಯನ್ನು ದಸ್ತಗಿರಿ ಮಾಡಿ‌ ಪ್ರಧಾನ ಸಿ.ಜೆ ಮತ್ತು‌ ಜೆ.ಎಮ್.ಎಫ್.ಸಿ‌ ನ್ಯಾಯಾಲಯದ ಮುಂದೆ‌ ಹಾಜರು ಪಡಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ‌ ಗಿರಿಶ ಆರ್, ಬಿ ಅವರು ಆರೋಪಿತನಿಗೆ ಮೂರು ತಿಂಗಳ ಸಾದಾ ಕಾರಾಗೃಹ ವಾಸ ಶಿಕ್ಷೆಯನ್ನು ವಿಧಿಸಿ ಆದೇಶಿಸಿದರು.
ಇದರಿಂದಾಗಿ ಆರೋಪಿ ಶ್ರೀಕಾಂತ ಜಮನಾಳ ಇದೀಗ ಧಾರವಾಡ ಕೇಂದ್ರ ಕಾರಾಗೃಹದ ಪಾಲಾಗಿದ್ದಾನೆ.

ಈ ಆದೇಶ ಪ್ರಕಟಗೊಳ್ಳುತ್ತಿದ್ದಂತೆ ನ್ಯಾಯಾಲಯದಿಂದಲೇ ಜಮನಾಳ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದ. ಪೊಲೀಸರು ಬೆನ್ನು ಹತ್ತಿ ಆತನನ್ನು ಹಿಡಿದು ಸಾರ್ವಜನಿಕವಾಗಿಯೇ ಗೂಸಾ ಕೊಟ್ಟು ಜೈಲಿಗೆ ಅಟ್ಟಿದ್ದಾರೆ.