ಗೋರಕ್ಷಣೆ'ಯ ಹೆಸರಲ್ಲಿ ನಡೆದ ಹತ್ಯೆ, ಕೋಮುದ್ವೇಷ ಬಡಿದೆಬ್ಬಿಸುವ ಯೋಜಿತ ಸಂಚಿನ‌ ಭಾಗ - ಸಿದ್ಧರಾಮಯ್ಯ

ಗೋರಕ್ಷಣೆ'ಯ ಹೆಸರಲ್ಲಿ ನಡೆದ ಹತ್ಯೆ, ಕೋಮುದ್ವೇಷ ಬಡಿದೆಬ್ಬಿಸುವ ಯೋಜಿತ ಸಂಚಿನ‌ ಭಾಗ - ಸಿದ್ಧರಾಮಯ್ಯ

ಬೆಂಗಳೂರು: ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ( Karnataka Assembly Election 2023 ) ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ‌ ಭಾಗವಾಗಿರುವ ಸಾಧ್ಯತೆ ಇದೆ.‌ ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು ಎಂಬುದಾಗಿ ಸಾತನೂರು ಬಳಿಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಮುಸ್ಲೀಂ ಯುವಕನ ಹತ್ಯೆಯನ್ನು ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಖಂಡಿಸಿದ್ದಾರೆ.ಧರ್ಮ ರಕ್ಷಣೆಯ ಹೆಸರಲ್ಲಿ ಬಿಜೆಪಿ ರಾಜ್ಯದಲ್ಲಿ ಬೆಳೆಸಿದ ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ ಯುವಕನ ಹತ್ಯೆ ಸಾಕ್ಷಿ. ಈ ಹತ್ಯೆಯ ಹೊಣೆಯನ್ನು ಅರಗ ಜ್ಞಾನೇಂದ್ರ ಅವರಂತಹ ಅಸಮರ್ಥ ಗೃಹ ಸಚಿವರೇ ಹೊರಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.ಕರ್ನಾಟಕ ಇಂತಹ ಅಸಮರ್ಥ‌, ಅದಕ್ಷ ಮತ್ತು ಬೇಜವಾಬ್ದಾರಿ ಗೃಹ‌ಸಚಿವರನ್ನು ಎಂದೂ‌ ನೋಡಿರಲಿಲ್ಲ. ತನ್ನ‌ ಇಲಾಖೆಯ ಮೇಲೆ ನಿಯಂತ್ರಣ‌ ಇಲ್ಲದ ಈ ಸಚಿವರಿಗೆ ರಾಜ್ಯದ ಶಾಂತಿ‌ ಮತ್ತು‌ ಸುವ್ಯವಸ್ಥೆಯನ್ನು‌ ನಿರ್ವಹಿಸಲು‌ ಸಾಧ್ಯವೇ? ಮೊದಲು ಅರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ಒತ್ತಾಯಿಸಿದ್ದಾರೆ.ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ನಿತ್ಯ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಈ ಸರ್ಕಾರ ಅಸ್ತಿತ್ವದಲ್ಲಿರುವಾಗ ಚುನಾವಣೆ ನ್ಯಾಯಯುತವಾಗಿ ನಡೆಯುವುದು ಅನುಮಾನ. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.