ಮಾದರಿ ನಗರವಾಗಿ ಬೆಂಗಳೂರು ಮೇಲ್ದರ್ಜೆಗೇರಿಸಲು ಕ್ರಮ : ಸಿಎಂ ಬೊಮ್ಮಾಯಿ
ಬೆಳಗಾವಿ : ಬೆಂಗಳೂರು ನಗರವನ್ನು ಮಾದರಿ ನಗರವಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಂಗಳವಾರ ತಿಳಿಸಿದರು.
ಅವರು ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಕೆ.ಜೆ.ಜಾರ್ಜ್ ಅವರ ಪ್ರಶ್ನೆಗೆ ಉತ್ತರಿಸಿ, ಸ್ಮಾರ್ಟ್ ಸಿಟಿ ಅನುದಾನ ಮಾತ್ರವಲ್ಲದೆ, ನಗರೋತ್ಥಾನ ಯೋಜನೆ, ಬಿಬಿಎಂಪಿ ಹಾಗೂ ಇತರ ಇಲಾಖೆಗಳ ಅನುದಾನವನ್ನು ಬಳಸಿಕೊಂಡು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಬೆಂಗಳೂರು ನಗರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಿ, ಇದೇ ಮಾದರಿಯಲ್ಲಿ ರಾಜ್ಯದ ಇತರ ಪ್ರಮುಖ ನಗರಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆ ಬೆಂಗಳೂರಿನಲ್ಲಿ ಎರಡು ಪ್ರಮುಖ ರಾಜ ಕಾಲುವೆಗಳನ್ನು ೫೦೦ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣ ಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಸ್ತುತ ಸ್ಮಾರ್ಟ್ಸಿಟಿ ಯೋಜನೆಯಡಿ ೫೫೦ ಕೋಟಿ ರೂ. ವೆಚ್ಚದಲ್ಲಿ ೧೦ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಇನ್ನುಳಿದ ಕಾಮಗಾರಿಗಳು ಮುಂದಿನ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಲಿವೆ. ಇನ್ನುಳಿದಂತೆ ಕೆಆರ್ ಮಾರ್ಕೆಟ್ ೬೦ಕೋಟಿ, ಕಬ್ಬನ್ ಪಾರ್ಕ್ ೪೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಯೋಜನೆಯಡಿ ೪೯೩ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ೪೧೬ ಕೋಟಿ ರೂ. ವೆಚ್ಚ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗಿದೆ. ಹಣಕಾಸು ಇಲಾಖೆ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ನಿರ್ವಹಿಸುತ್ತಿರುವುದರಿಂದ ಬೆಂಗಳೂರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತಿದ್ದೇನೆ. ಬೆಂಗಳೂರು ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.