ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಲ್ಲ; ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು, ಡಿಸೆಂಬರ್ 21: ಮಹಾರಾಷ್ಟ್ರ ಏಕೀಕರಣ ಸಮಿತಿ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಲ್ಲ. ಇದನ್ನು ಹೇಳುವ ಹಕ್ಕು ನಮಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯಲ್ಲಿ ನಗರಸಭೆ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ಬೆಳಗಾವಿ ನಮ್ಮ ಹಕ್ಕು, ಹೇಗೆ ಸೊಲ್ಲಾಪುರ, ನಾಂದೆಡನ್ನು ಮಹಾರಾಷ್ಟ್ರ ಬಿಟ್ಟುಕೊಡುವುದಿಲ್ಲವೋ ಹಾಗೆಯೇ ನಾವು ಸಹ ಬೆಳಗಾವಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.
ಸರ್ಕಾರದ ಪ್ರತಿಯೊಂದು ಯೋಜನೆಯೂ ಕೊನೆಯ ಹಳ್ಳಿಯವರೆಗೂ ತಲುಪುತ್ತಿವೆ, ನಾವು ಭೇದ ಭಾವ ಮಾಡಿಲ್ಲ. ಆದರೆ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಭೇದ- ಭಾವದ ಮಾತನಾಡುತ್ತಿದ್ದಾರೆ, ಅವರಿಗೆ ಮೊದಲು ಬುದ್ಧಿ ಬರಬೇಕು ಎಂದು ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡದ ನೆಲದಲ್ಲಿದ್ದು, ಕನ್ನಡದ ನೆಲದ ನೀರು ಕುಡಿದು, ಇಲ್ಲಿಯೇ ವ್ಯವಹಾರಗಳನ್ನು ಮಾಡುತ್ತಿರುವ ಎಂಇಎಸ್‌ನವರು ಕನ್ನಡದ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣನಿಗೆ ಮಾಡಿರುವ ಅವಮಾನ ಖಂಡಿತ ಸಹಿಸುವಂತದ್ದಲ್ಲ ಇದು ಖಂಡನೀಯ ಎಂದು ತಿಳಿಸಿದರು.
ಈ ಕೃತ್ಯವನ್ನು ಎಸಗಿದವರಿಗೆ ಉಗ್ರವಾದ ಶಿಕ್ಷೆಯನ್ನು ನೀಡಬೇಕು. ದೇಶದ್ರೋಹದ ಆರೋಪದ ಮೇಲೆ ಬಂಧನ ಮಾಡಬೇಕು ಹಾಗೂ ಮುಂದೆ ಆ ರೀತಿಯ ಕೆಲಸವನ್ನು ಮಾಡದಂತೆ ಶಿಕ್ಷೆ ನೀಡಿದಾಗ ಉಳಿದವರಿಗೂ ಬುದ್ಧಿ ಬರುತ್ತದೆ. ಈ ಕುರಿತು ಸಂಬಂಧ ಪಟ್ಟವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಈ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಪಕ್ಷ ಭೇದ ಮರೆತು ಸುವರ್ಣಸೌಧದ ಅಧಿವೇಶನದ ವೇಳೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಅಪರಾಧಿಗಳನ್ನು ಬಂಧಿಸಿ, ಅವರಿಗೆ ಉಗ್ರ ಶಿಕ್ಷೆಯನ್ನು ಕೊಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇನ್ನು ಎಂಇಎಸ್ ನಿಷೇಧದ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಚರ್ಚೆಗಳು ನಡೆಯುತ್ತಿದ್ದು, ಒಕ್ಕೂಟದ ವ್ಯವಸ್ಥೆಯಲ್ಲಿ ರಾಜಕೀಯ ಪಾರ್ಟಿ ಮಾಡಿಕೊಳ್ಳಲು ಅವಕಾಶ ಇದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕದಲ್ಲಿ ಅಗತ್ಯ ಇಲ್ಲ, ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಡಿ.ಕೆ. ಶಿವಕುಮಾರ್‌ಗೆ ಸಿ.ಟಿ. ರವಿ ತಿರುಗೇಟು
ಪಟಾಕಿ ರವಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು. ಪಟಾಕಿ ಶುಭ ಕಾರ್ಯದಲ್ಲಿ ಸ್ವಾಗತ ಮಾಡಲು ಹಚ್ಚುತ್ತಾರೆ. ಆದರೆ ಬೆಂಕಿ ಹಚ್ಚುವ ಜಾಯಮಾನಕ್ಕೆ ನಾನು ಸೇರಿದವನಲ್ಲ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಉದ್ದೇಶ ಅರಾಜಕತೆ ಸೃಷ್ಟಿ ಮಾಡುವುದು, ಬೆಂಕಿ ಹಾಕುವುದು. ಆ ಬೆಂಕಿ ಹಾಕುವ ಜಾಯಮಾನಕ್ಕೆ ನಾನು ಸೇರಿದವನಲ್ಲ. ಬೆಂಕಿ ಹಾಕುವವರು ಡೇಂಜರ್. ಊರಿಗೆ ಬೆಂಕಿ ಹಾಕಿ ಇದ್ದಿಲು ಮಾರಿದರೆ ಎಷ್ಟು ಲಾಭ ಆಗುತ್ತದೆ ಅಂತಾ ಮನಸ್ಥಿತಿ ಇರುವವರು ಕಾಂಗ್ರೆಸ್ಸಿಗರು ಎಂದು ಸಿ.ಟಿ. ರವಿ ಕಿಡಿಕಾರಿದರು.
ಬೆಂಕಿ ಹಾಕುವ ಮನಸ್ಥಿತಿ ಕಾರಣಕ್ಕೆ ಇವತ್ತು ಮರಾಠ, ಕನ್ನಡಿಗರ ನಡುವೆ ಸಂಘರ್ಷ ಉಂಟಾಗುವುದಕ್ಕೆ ಕಾರಣವಾಗಿದೆ. ಕನ್ನಡ ಬಾವುಟ ಸುಟ್ಟು ಗಲಭೆ ಎಬ್ಬಿಸುವಂತಹ ಕೆಲಸ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಮಾಡಿದ್ದಾರೆ. ಶಿವಾಜಿ ಪ್ರತಿಮೆಗೆ ಮಸಿ ಬಳಿದು ಮರಾಠಿಗರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಸಿದರ ಎಂದು ವಾಗ್ದಾಳಿ ನಡೆಸಿದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ಕರ್ನಾಟಕದಲ್ಲಿ ಮರಾಠ vs ಕನ್ನಡಿಗರು ಅಂತಾ ಸಂಘರ್ಷ ಉಂಟು ಮಾಡುವ ಸಂಚು ಮಾಡಿದರು. ಇದೆಲ್ಲದರ ಹಿಂದೆ ಕಾಂಗ್ರೆಸ್ ಇದ್ದು, ಈಗ ಬಂಧನವಾಗಿರುವುದು ಕಾಂಗ್ರೆಸ್ ಬೆಂಬಲಿಗರು. ಬಂಧಿತರು ಡಿ.ಕೆ. ಶಿವಕುಮಾರ್ ಹಾಗೂ ಜಮೀರ್ ಖಾನ್ ಬೆಂಬಲಿಗರು ಎಂದು ತಿಳಿಸಿದರು.
ತುಕ್ಡೆ ಗ್ಯಾಂಗ್‌ನಲ್ಲಿದ್ದವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಅದು ಕನ್ನಯ್ಯ ಕುಮಾರ್ ಇರಬಹುದು, ಹಾರ್ದಿಕ್ ಪಟೇಲ್ ಇರಬಹುದು. ತುಕ್ಡೆ ಗ್ಯಾಂಗ್‌ನ ಪ್ರಚೋದನೆಯಿಂದ ಕರ್ನಾಟಕದಲ್ಲಿ ಬೆಂಕಿ ಹತ್ತಿದೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ ಹೇಳಿದರು.