ರೋಟರಿ ಕಬ್ಲ್ ಸೆವೆನ್ ಹಿಲ್ಸ್ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ "ವಿದ್ಯಾಸೇತು" ಪುಸ್ತಕ ವಿತರಣೆ

ರೋಟರಿ ಕಬ್ಲ್ ಸೆವೆನ್ ಹಿಲ್ಸ್ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ "ವಿದ್ಯಾಸೇತು" ಪುಸ್ತಕ ವಿತರಣೆ
ಧಾರವಾಡ: ನಗರದ ರೋಟರಿ ಕಬ್ಲ್ ಆಫ್ ಸೆವೆನ್ ಹಿಲ್ಸ್ ವತಿಯಿಂದ ಧಾರವಾಡದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳನ್ನು ಸರಳವಾಗಿ ವಿವರಿಸುವ "ವಿದ್ಯಾಸೇತು" ಪುಸ್ತಕಗಳನ್ನು ಸಾರ್ವಜನಿಕ ಶಿಕ್ಷಣ ಅಪರ ಆಯುಕ್ತ ಕಚೇರಿಯಲ್ಲಿ ವಿತರಿಸಲಾಯಿತು.
ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಶಿಕ್ಷಣವು ಈ ಜಗತ್ತನ್ನು ಮಾರ್ಪಾಡಿಸುವ ಸಾಧನವಾಗಿದೆ ಕೋವಿಡ್ ನಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಉಂಟಾಗಿರುವ ಕೊರತೆಯನ್ನು ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ವಿದ್ಯಾಸೇತು ಪುಸ್ತಕ ನೀಡುವ ಮೂಲಕ ನೀಗಿಸುತ್ತಿದೆ. ಈ ಪುಸ್ತಕಗಳು ೮.೯ ಹಾಗೂ ೧೦ನೇ ತರಗತಿಯ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ.
ವಿದ್ಯಾಸೇತುವಿಗೆ ಟಾಟಾ ಹಿಟಾಚಿ, ಆರ್.ಕೆ.ಫೌಂಡೇಶನ್, ಉದ್ಯಮಿ ಸಂತೋಷ ಆರ್, ಸಮಾಜ ಸೇವಕರಾದ ಪರಶುರಾಮ ಅರಕೇರಿ, ನಿರಂಜನ್ ಹಿರೇಮಠ, ತಾರಾದೇವಿ ವಾಲಿ ಮುಂದಾದವರು ಆರ್ಥಿಕ ನೆರವು ನೀಡಿದ್ದಾರೆ.ಅವರ ಶಿಕ್ಷಣ ಪ್ರೀತಿಗೆ ಶ್ಲಾಘನೀಯವಾದುದು.ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಇಂತಹ ರಚನಾತ್ಮಕ ಸೇವೆಗಳನ್ನು ಇನ್ನಷ್ಟು ಹೆಚ್ಚಿಸಲಿ. ೫೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಗಳಿಗೆ ಆದ್ಯತೆ ನೀಡಿ ಕಲಿಕೆಯ ಎಲ್ಲ ಸೌಕರ್ಯಗಳನ್ನು ನೀಡಲಾಗುವುದು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಮಮತಾ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಕಲಿಕೆಯ ಕುಂದು ಕೊರತೆಗಳನ್ನು ನಿವಾರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಿಂದಿನ ತರಗತಿ ಕಲಿಕೆಯ ಸಾಮರ್ಥ್ಯ ಆಧರಿಸಿ ಮುಂದಿನ ತರಗತಿಯ ಶಿಕ್ಷಣ ಮುಂದುವರೆಸಲು ಎಲ್ಲ ಕ್ರಮಗಳನ್ನು ನುರಿತ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾಸೇತು ಪುಸ್ತಕವನ್ನು ತಯಾರಿಸಲಾಗಿದೆ. ಜಿಲ್ಲೆಯ ಎಲ್ಲ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಪುಸ್ತಕ ಒದಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಪ್ರಸ್ತಾವಿಕವಾಗಿ ಮಾತನಾಡಿ, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಸಂಸ್ಥೆಯು ಒದಗಿಸಿರುವ ಪುಸ್ತಕಗಳನ್ನು ಇಬ್ಬರು ವಿದ್ಯಾರ್ಥಿಗಳಿಗೆ ಒಂದು ಸೆಟ್‌ನಂತೆ ವಿತರಿಸಲಾಗುವುದು . ಶಾಲಾವಾರು ಪಟ್ಟಿ ತಯಾರಿಸಿ ವಿತರಿಸಲಾಗುವುದು.ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ನ ಕಾರ್ಯ ಮಾದರಿಯಾದುದಾಗಿದೆ ಎಂದರು. ಈ ಸಂದರ್ಭದಲ್ಲಿ ಡಿಡಿಪಿಐ ಎಮ್.ಎಫ್. ಕುಂದಗೋಳ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ,ಶ್ರೀಶೈಲ ಕರಿಕಟ್ಟಿ, ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಅಧ್ಯಕ್ಷೆ ಡಾ. ಪಲ್ಲವಿ ದೇಶಪಾಂಟೆ, ಕಾರ್ಯದರ್ಶಿ ಗೌರಿ ಮಾದಲಭಾವಿ ಸೇರಿದಂತೆ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾ ನಾಡಿಗೇರಿ ಕಾರ್ಯಕ್ರಮ ನಿರೂಪಿಸಿದರು, ಧಾರವಾಡ ಶಹರ ಬಿಇಓ ಗಿರೀಶ ಪದಕಿ ವಂದಿಸಿದರು.