ರೈತನಿಗೆ ಪ್ರಾಣ ಸಂಕಟ, ವರುಣನಿಗೆ ಚೆಲ್ಲಾಟ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ರೈತರ ಗೋಳು

ಕಳೆದ ಎರಡು ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಕಳೆದುಕೊಂಡು ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಧಾರವಾಡ ಜಿಲ್ಲೆಯ ನಿಗದಿ, ಹೊಲ್ತಿಕೋಟಿ, ದೇವರಹುಬ್ಬಳ್ಳಿ ಸೇರಿದಂತೆ ಅನೇಕ ಭಾಗಗಳಲ್ಲಿ ಬೆಳೆದಿದ್ದ ಭತ್ತ, ಜೋಳ, ಕಬ್ಬು ಸಂಪೂರ್ಣ ನೆಲಕಚ್ಚಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಕಟಾವು ಮಾಡಿಟ್ಟಿದ್ದ ಭತ್ತ ಸಂಪೂರ್ಣ ನೀರಿನಲ್ಲಿ ನಿಂತಿದೆ. ಇತ್ತು ಕಬ್ಬು ಕೂಡ ಬುಡಸಮೇತ ಕಿತ್ತು ಬಿದ್ದಿದ್ದು, ಜೋಳದ ಬೆಳೆ ಮಳೆಯಿಂದಾಗಿ ಸಂಪೂರ್ಣ ನೆಲಕಚ್ಚಿ ರೈತರು ಕಣ್ಣೀರು ಹಾಕುವಂತಾಗಿದೆ. ನಿಗದಿ, ದೇವರಹುಬ್ಬಳ್ಳಿ, ಅಂಬ್ಲಿಕೊಪ್ಪ ಗ್ರಾಮಗಳ ಸುತ್ತಮುತ್ತ ಇರುವ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, ಭತ್ತ ಸಂಪೂರ್ಣ ಮಳೆಯಿಂದಾಗಿ ಹಾನಿಗೀಡಾಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಟಾವು ಮಾಡಿ ಒಣಗಿಸಲಾಗಿದ್ದ ಭತ್ತ ಮಳೆಯಿಂದಾಗಿ ನೀರಿನಲ್ಲಿ ನೆನೆಯುವಂತಾಗಿದೆ. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ಕಂಗಾಲಾಗಿದ್ದು, ಸರ್ಕಾರ ಆದಷ್ಟು ಬೇಗ ಈ ಬಗ್ಗೆ ಸರ್ವೆ ಮಾಡಿಸಿ ಬೆಳೆನಷ್ಟ ಅನುಭವಿಸಿದ ರೈತರ ನೆರವಿಗೆ ಬರಬೇಕಾಗಿದೆ.