ಸೋಂಕು ಮುಕ್ತವಾಗಿದ್ದ ದ್ವೀಪ ರಾಷ್ಟ್ರ ಪುಲಾವುನಲ್ಲಿ 2 ಕೋವಿಡ್ ಪ್ರಕರಣಗಳು ಪತ್ತೆ

ಕೊರೊರ್, ಪುಲಾವು: ಕೊರೊನಾ ಸೋಂಕು ತಟ್ಟದ, ಫೆಸಿಫಿಕ್ ಸಾಗರದ ಪುಟ್ಟ ದ್ವೀಪ ರಾಷ್ಟ್ರ ಪುಲಾವುನಲ್ಲೂ ಎರಡು ಪ್ರಕರಣಗಳು ಪತ್ತೆಯಾಗಿವೆ.
ಗುವಾಮ್‌ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರು ಪ್ರಯಾಣಿಕರು ಸೇರಿದಂತೆ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪ್ರತ್ಯೇಕ ವಾಸಕ್ಕೆ ಒಳಪಡಿಸಲಾಗಿದೆ.
'ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಹೇರಲು ಸರ್ಕಾರ ನಿರ್ಧರಿಸಿದೆ. ಸೋಂಕಿನ ಬಗ್ಗೆ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ' ಎಂದು ಪುಲಾವುನ ಆರೋಗ್ಯ ಸಚಿವಾಲಯವು ಹೇಳಿದೆ.
18 ಸಾವಿರ ಜನಸಂಖ್ಯೆ ಹೊಂದಿರುವ ಪುಲಾವು ರಾಷ್ಟ್ರದಲ್ಲಿ ಶೇಕಡ 80 ರಷ್ಟು ಜನರು ಲಸಿಕೆ ಪಡೆದಿದ್ದಾರೆ.
'ಪುಲಾವು ಕೋವಿಡ್ ಮುಕ್ತ ರಾಷ್ಟ್ರವಾಗಿತ್ತು. ಆದರೆ ಈಗ ಕೋವಿಡ್‌ನಿಂದ ಸುರಕ್ಷಿತ ದೇಶವಾಗಿದೆ. ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಬಳಿಕ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟರೆ, ಅದು ಜ್ವರದಂತೆ ಕಾಣುತ್ತದೆ. ಅವರಲ್ಲಿ ಸೋಂಕಿನ ಲಕ್ಷಣಗಳಿರುವುದಿಲ್ಲ' ಎಂದು ಅಲ್ಲಿನ ಅಧ್ಯಕ್ಷ ಸುರಂಗೆಲ್ ವಿಪ್ಸ್ ಹೇಳಿದರು.
'ಸೋಂಕಿತ ಪ್ರಯಾಣಿಕರು ಇಲ್ಲಿಗೆ ಆಗಮಿಸುವುದಕ್ಕೂ 72 ಗಂಟೆಗಳ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ವರದಿಯು ನೆಗೆಟಿವ್ ಬಂದಿತ್ತು. ಆದರೆ ಕೆಲ ದಿನಗಳ ಬಳಿಕ ಅವರಲ್ಲಿ ಸೋಂಕು ದೃಢಪಟ್ಟಿದೆ' ಎಂದು ಸಚಿವಾಲಯವು ತಿಳಿಸಿದೆ.
ಕೋವಿಡ್ ಮುಕ್ತ 14 ರಾಷ್ಟ್ರಗಳ ಪೈಕಿ ಪುಲಾವು ಕೂಡ ಒಂದಾಗಿತ್ತು.