ಕಾಬುಲ್​ನಿಂದ ಹೊರಟಿದೆ, 85 ಭಾರತೀಯರನ್ನು ಹೊತ್ತ ಐಎಎಫ್​​ ವಿಮಾನ

ಕಾಬುಲ್​ನಿಂದ ಹೊರಟಿದೆ, 85 ಭಾರತೀಯರನ್ನು ಹೊತ್ತ ಐಎಎಫ್​​ ವಿಮಾನ

ನವದೆಹಲಿ: ಅಫ್ಘಾನಿಸ್ತಾನದಲ್ಲಿರುವ ಭಾರತೀಯ ನಾಗರೀಕರನ್ನು ತೆರವುಗೊಳಿಸುವ ಕಾರ್ಯವನ್ನು ಭಾರತ ಸರ್ಕಾರ ಮುಂದುವರಿಸಿದ್ದು, ಐಎಎಫ್​ನ ವಿಮಾನವೊಂದು 85 ಜನರನ್ನು ಭಾರತಕ್ಕೆ ವಾಪಸ್​ ತರುತ್ತಿದೆ ಎನ್ನಲಾಗಿದೆ. ಭಾರತೀಯ ವಾಯುಪಡೆಯ ಸಿ-130ಜೆ ಸಾರಿಗೆ ವಿಮಾನವು ಇಂದು ಬೆಳಿಗ್ಗೆ ಕಾಬುಲ್​ನಿಂದ ಹೊರಟಿದ್ದು, ತಾಜಿಕಿಸ್ತಾನದಲ್ಲಿ ಇಂಧನ ಭರ್ತಿಗಾಗಿ ನಿಂತಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತವು ತನ್ನೆಲ್ಲಾ ಡಿಪ್ಲೊಮಾಟಿಕ್​ ಸಿಬ್ಬಂದಿಯನ್ನು ಅಫ್ಘಾನಿಸ್ತಾನದಿಂದ ಈ ಮೊದಲೇ ತೆರವುಗೊಳಿಸಿತ್ತು. ಆದರೆ ತಾಲಿಬಾನ್​ ಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದ ಹಲವು ನಗರಗಳಲ್ಲಿ ಸುಮಾರು 1,000 ಭಾರತೀಯರು ಇನ್ನೂ ಇದ್ದಾರೆ. ಇವರಲ್ಲಿ ಎಲ್ಲರೂ ಭಾರತೀಯ ಎಂಬೆಸಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲವಾದ್ದರಿಂದ, ಅವರಿರುವ ಸ್ಥಳ ಮತ್ತು ಪರಿಸ್ಥಿತಿಗಳನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ಭಾರತೀಯರನ್ನು ದೇಶಕ್ಕೆ ವಾಪಸ್​ ತರುವುದಕ್ಕಾಗಿ, ವಾಯುಪಡೆಯ ಮತ್ತೊಂದು ಸಿ-17 ಸಾರಿಗೆ ವಿಮಾನವು, ಕಾಬುಲ್​ಗೆ ತೆರಳಲು ಸ್ಟ್ಯಾಂಡ್​ಬೈನಲ್ಲಿದ್ದು ಸಿದ್ಧವಾಗಿದೆ. ತಾಲಿಬಾನ್​ ಚೆಕ್​ಪೋಸ್ಟ್​​ಗಳಿಂದಾಗಿ ಜನರು ವಿಮಾನ ನಿಲ್ದಾಣ ತಲುಪುವುದು ಕಷ್ಟಕರವಾಗಿದ್ದು, ಸಾಕಷ್ಟು ಭಾರತೀಯರು ನಿಲ್ದಾಣ ತಲುಪಿದಂತೆ, ಮತ್ತೆ ತೆರವುಗೊಳಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)