ಅಮೃತಸರ: ಅಂತರರಾಷ್ಟ್ರೀಯ ಗಡಿಯಲ್ಲಿ ₹200 ಕೋಟಿ ಮೌಲ್ಯದ 40 ಕೆ.ಜಿ ಹೆರಾಯಿನ್ ವಶ
ಚಂಡೀಗಡ: 'ಅಮೃತಸರದ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ₹200 ಕೋಟಿ ಮೌಲ್ಯದ 40.810 ಕೆ.ಜಿ. ಹೆರಾಯಿನ್ ಅನ್ನು ಶನಿವಾರ ಮುಂಜಾನೆ ವಶಕ್ಕೆ ಪಡೆಯಲಾಗಿದೆ' ಎಂದು ಪೊಲೀಸರು ತಿಳಿಸಿದರು.
ಪಂಜಾಬ್ ಪೊಲೀಸ್ ಮತ್ತು ಗಡಿ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಹೆರಾಯಿನ್ ವಶಪಡಿಸಿಕೊಂಡಿವೆ.
'ಅಮೃತಸರದ ಘರಿಂದಾ ಪ್ರದೇಶದ ನಿವಾಸಿ ನಿರ್ಮಲ್ ಸಿಂಗ್ ಎನ್ನುವವರು ಪಾಕಿಸ್ತಾನದಿಂದ ಕಳುಹಿಸಲಾಗಿರುವ ಹೆರಾಯಿನ್ ಅನ್ನು ಅಂತರರಾಷ್ಟ್ರೀಯ ಗಡಿಯಿಂದ ಭಾರತದೊಳಗೆ ತೆಗೆದುಕೊಂಡು ಬರಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿ ಆಧಾರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು' ಎಂದು ಅಮೃತಸರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಸಿಂಗ್ ಕುರಾನಾ ತಿಳಿಸಿದ್ದಾರೆ.
'ನಿರ್ಮಲ್ ಸಿಂಗ್ ಪರಾರಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಅವರು ತಿಳಿಸಿದರು.