ಅಭಿಮಾನಿಗಳಿಂದ ಒತ್ತಾಯ ಬಂದರೆ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ನೊಡೋಣ: ಸುಮಲತಾ

ಬೆಂಗಳೂರು: ಅಭಿಷೇಕ್ ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೆ 20 ತಿಂಗಳಿದೆ. ಆಗ ಏನಾಗಲಿದೆಯೋ ನೋಡೋಣ. ಅಭಿಮಾನಿಗಳಿಂದ ಒತ್ತಾಯ ಬಂದರೆ ನೋಡೋಣ. ಸದ್ಯಕ್ಕಂತೂ ಅಭಿಷೇಕ್ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ ಎಂದು ಸಂಸದೆ ಸುಮಲತಾ ಹೇಳಿದರು.
ಅವರು ಇಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಗಣಿ, ಮಹಿಳಾ ಮತ್ತು ಮಕ್ಳಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರನ್ನ ಭೇಟಿ ಮಾಡಿದರು. ಈ ವೇಳೆಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ಸಂಬಂಧ ಚರ್ಚೆ ನಡೆಸಿದರು. ಇದೇ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಚರ್ಚೆ ಮಾಡಿದರು. ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಈಗಲೂ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಹಾಗಾಗಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಬಗ್ಗೆಯೂ ಸಚಿವರ ಜೊತೆ ಚರ್ಚಿಸಿದೆ ಎಂದರು.