ಕೊಲೆ ಮಾಡಿದ ಎಂಟು ವರ್ಷಗಳ ನಂತರ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ದಂಪತಿ

ಕೊಲೆ ಮಾಡಿದ ಎಂಟು ವರ್ಷಗಳ ನಂತರ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ದಂಪತಿ
ವಿಜಯಪುರ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಪತಿ ಕೊನೆಗೂ ಮಹಾರಾಷ್ಟ್ರದ ನಾಸಿಕ್ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು: ವಿಜಯಪುರ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಪತಿ ಕೊನೆಗೂ ಮಹಾರಾಷ್ಟ್ರದ ನಾಸಿಕ್ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
2015ರ ಆಗಸ್ಟ್ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 21 ವರ್ಷದ ಲಿಂಗರಾಜು ಸಿದ್ದಪ್ಪ ಪೂಜಾರಿ ಎಂಬುವವರು ಕೊಲೆಯಾಗಿದ್ದರು. ಆರೋಪಿಗಳನ್ನು ಭಾಗ್ಯಶ್ರೀ (31) ಮತ್ತು ಆಕೆಯ ಪತಿ ಸುಪುತ್ರ ಶಂಕರಪ್ಪ ತಳವಾರ (32) ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಭಾಗ್ಯಶ್ರೀ ಅವರ ಸಹೋದರ ಎನ್ನಲಾಗಿದೆ. ಕೊಲೆಯಾದ ಸಂದರ್ಭದಲ್ಲಿ ಭಾಗ್ಯಶ್ರೀ ಮತ್ತು ತಳವಾರ ಕಾಲೇಜು ವ್ಯಾಸಂಗ ಮಾಡುತ್ತಿದ್ದರು. ಇವರಿಬ್ಬರು ಪ್ರೀತಿಸುತ್ತಿದ್ದರು.

ಆದರೆ, ಮನೆಯವರು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ, ಇಬ್ಬರು ದೂರವಾಗಿದ್ದರು. ತಳವಾರ ಮೊದಲು ಜಿಗಣಿಗೆ ಬಂದಿದ್ದನು. ಭಾಗ್ಯಶ್ರೀ ತನ್ನ ಮನೆಯಲ್ಲಿದ್ದಳು.

ಬಳಿಕ ತಳವಾರ ಭಾಗ್ಯಶ್ರೀಯನ್ನು ಸಂಪರ್ಕಿಸಿ, ಜಿಗಣಿಗೆ ಬರುವಂತೆ ತಿಳಿಸಿದ್ದಾನೆ. ಈ ವೇಳೆ ಭಾಗ್ಯಶ್ರೀ ತನ್ನ ತಮ್ಮ ಲಿಂಗರಾಜು ಜೊತೆಗೆ ಜಿಗಣಿಗೆ ಬಂದಿದ್ದಾರೆ. ಬಳಿಕ ಮೂವರು ಒಂದೇ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ತಳವಾರ ಮತ್ತು ಭಾಗ್ಯಶ್ರೀ ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದು, ವಿವಾಹಿತರಂತೆ ನಟಿಸುತ್ತಿದ್ದರು.

ಇವರಿಬ್ಬರ ಸಾಮೀಪ್ಯದ ಬಗ್ಗೆ ಬೇಸರಗೊಂಡ ಲಿಂಗರಾಜು, ಭಾಗ್ಯಶ್ರೀಗೆ ಈ ಸಂಬಂಧವನ್ನು ಕೊನೆಗಾಣಿಸುವಂತೆ ಕೇಳಿಕೊಂಡಿದ್ದನು. ನಿರಾಕರಿಸಿದಾಗ, ಆಕೆಗೆ ಥಳಿಸಿದ್ದಾನೆ. ಆಕೆಗೆ ಸಹಾಯ ಮಾಡಲು ಮುಂದಾದಾಗ ತಳವಾರನಿಗೂ ಥಳಿಸಲಾಗಿದೆ. ಇದರಿಂದ ಕುಪಿತಳಾದ ಭಾಗ್ಯಶ್ರೀ ತನ್ನ ಸಹೋದರನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ನಂತರ ಇಬ್ಬರೂ ಸಂತ್ರಸ್ತನ ದೇಹವನ್ನು ಕತ್ತರಿಸಿ ಜಿಗಣಿಯ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಗಣಿ ಪೊಲೀಸರು ಮೃತದೇಹವನ್ನು ಗುರುತಿಸಿದ್ದು, ಕೊಲೆ ಮಾಡಿದ ಸಂತ್ರಸ್ತನ ಸಹೋದರಿ ಮತ್ತು ಆಕೆಯ ಪ್ರೇಮಿ ನಾಪತ್ತೆಯಾಗಿದ್ದಾರೆ ಎಂದು ಅವರ ಮೂಲಗಳು ತಿಳಿಸಿವೆ. ಆರೋಪಿಗಳು ಫೋನ್ ಬಳಸುವುದನ್ನು ಬಿಟ್ಟ ಬಳಿಕ ಪೋಲೀಸರಿಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ, 2018 ರಲ್ಲಿ ಪ್ರಕರಣವ್ನು ಮುಚ್ಚಿಹಾಕುವ ವರದಿಯನ್ನು ಸಲ್ಲಿಸಿದರು.

ಇತ್ತೀಚೆಗೆ ನಡೆದ ಅಪರಾಧ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸ್ನ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಪುನಃ ತೆರೆಯುವಂತೆ ಜಿಗಣಿ ಪೊಲೀಸರಿಗೆ ಸೂಚಿಸಿದ್ದಾರೆ. ಆರೋಪಿಗಳು ಕೆಲಸ ಮಾಡುತ್ತಿದ್ದ ಕಂಪನಿಗೆ ನಾವು ಭೇಟಿ ನೀಡಿದ್ದೇವೆ. ಅಲ್ಲಿಂದ ಅವರು ಬೇರೆ ಕಂಪನಿಗೆ ತೆರಳಿರುವುದು ನಮಗೆ ಗೊತ್ತಾಯಿತು. ನಾವು ಈ ಬಗ್ಗೆ ಕ್ರಮ ಕೈಗೊಂಡಾಗ ಅವರು ನಾಸಿಕ್ನಲ್ಲಿರುವುದು ತಿಳಿಯಿತು. ಇಬ್ಬರೂ ಮದುವೆಯಾಗಿದ್ದರು ಮತ್ತು ತಮ್ಮ ಹೆಸರನ್ನು ಪ್ರಿಯಾಂಕಾ ಮತ್ತು ವಿನೋದ್ ರೆಡ್ಡಿ ಎಂದು ಬದಲಾಯಿಸಿಕೊಂಡಿದ್ದರು ಎಂದು ಅಧಿಕಾರಿ ಹೇಳಿದರು.