ಮಹಿಳೆಯರ ಪ್ರೀಮಿಯರ್ ಲೀಗ್: ತಂಡ ಖರೀದಿಸಿದ ಆರ್‌ಸಿಬಿ ಬಗ್ಗೆ ಕೊಹ್ಲಿ ಹೇಳಿದ್ದೇನು

ಬೆಂಗಳೂರು: ಇದೇ ಮೊದಲ ಬಾರಿ ನಡೆಯಲಿರುವ ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಒಂದು ತಂಡವನ್ನು ಖರೀದಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಟೀಮ್ ಇಂಡಿಯಾ ಬ್ಯಾಟರ್, ಆರ್‌ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ತಮ್ಮ ಫ್ರಾಂಚೈಸಿಯ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ನಮ್ಮ ಫ್ರಾಂಚೈಸಿಯು ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಅನ್ನು ಗೆದ್ದಿರುವುದು ತುಂಬಾ ರೋಮಾಂಚನವಾಗಿದೆ. ಕೆಂಪು & ಚಿನ್ನ (ಸ್ವರ್ಣ) ಜರ್ಸಿಯ ಧರಿಸಿದ ನಮ್ಮ ಆಟಗಾರ್ತಿಯರನ್ನು ಹುರಿದುಂಬಿಸಲು ಹೆಚ್ಚು ಸಮಯ ಕಾಯಲು ಸಾಧ್ಯವಾಗುತ್ತಿಲ್ಲ' ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ಬುಧವಾರ ನಡೆದ ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನಿರೀಕ್ಷೆಗಿಂತಲೂ ಹೆಚ್ಚಿನ ಲಾಭ ಹರಿದು ಬಂತು. ಐದು ತಂಡಗಳಿಂದ ಒಟ್ಟು ₹ 4669.99 ಕೋಟಿ ಬಿಸಿಸಿಐ ಬೊಕ್ಕಸ ಸೇರಿದೆ. ಅದಾನಿ ಸ್ಪೋರ್ಟ್ಸ್‌ಲೈನ್ ಸಂಸ್ಥೆಯು ₹1,289 ಕೋಟಿ ವ್ಯಯಿಸಿ ಅಹಮದಾಬಾದ್ ತಂಡವನ್ನು ತನ್ನದಾಗಿಸಿಕೊಂಡಿತು.
ಪುರುಷರ ಐಪಿಎಲ್ ತಂಡಗಳ ಮಾಲೀಕತ್ವ ಹೊಂದಿರುವ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ತಲಾ ಒಂದು ತಂಡವನ್ನು ಖರೀದಿಸಿದವು. ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಸಂಸ್ಥೆಯು ಲಖನೌ ಫ್ರ್ಯಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ.
ಪುರುಷರ ಚೊಚ್ಚಲ ಐಪಿಎಲ್‌ನಲ್ಲಿ ಎಂಟು ತಂಡಗಳು ಬಿಡ್ ಆಗಿದ್ದವು. ಆಗ ಒಟ್ಟು ₹5890 ಕೋಟಿಗೆ ತಂಡಗಳು ಮಾರಾಟವಾಗಿದ್ದವು.