ಜನಾರ್ಧನ್‌ ರೆಡ್ಡಿ ನೂತನ ಪಕ್ಷ ಕೆಆರ್‌ಪಿಗೆ ಸೇರ್ಪಡೆಯಾದ ಬಿಜೆಪಿ ಮುಖಂಡ

ಜನಾರ್ಧನ್‌ ರೆಡ್ಡಿ ನೂತನ ಪಕ್ಷ ಕೆಆರ್‌ಪಿಗೆ ಸೇರ್ಪಡೆಯಾದ ಬಿಜೆಪಿ ಮುಖಂಡ

ಗಂಗಾವತಿ, ಜನವರಿ, 18: ಬಿಜೆಪಿ ಮುಖಂಡ, ಬಳ್ಳಾರಿ ಜಿಲ್ಲಾ ಲಿಂಗಾಯತ ಸಮುದಾಯದ ನಾಯಕ ಗೋನಾಳು ರಾಜಶೇಖರಗೌಡ ಅವರು ಮಾಜಿ ಸಚಿವ ಜನಾರ್ಧನ್‌ ರೆಡ್ಡಿ ಅವರ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಈ ಕುರಿತು ಪಕ್ಷದ ಸಂಸ್ಥಾಪಕ ಆಗಿರುವ ಜಿ.ಜನಾರ್ಧನ್‌ ರೆಡ್ಡಿ ಆದೇಶ ಪತ್ರವನ್ನು ನೀಡಿದ್ದು, ಮುಂದಿನ ಆದೇಶದವರೆಗೆ ಕೆಆರ್‌ಪಿ ಪಕ್ಷದ ಬಳ್ಳಾರಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಹಾಗೆಯೇ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ. ಪಕ್ಷದ ಧ್ವಜವನ್ನು ಹಾಕುವ ಮೂಲಕ ರಾಜಶೇಖರಗೌಡ ಅವರನ್ನು ರೆಡ್ಡಿ ಬರಮಾಡಿಕೊಂಡಿದ್ದಾರೆ. ಈ ವೇಳೆ ದಮ್ಮೂರು ಶೇಖರ್ ಅವರು ಕೂಡ ಹಾಜರಿದ್ದರು.

ರಾಜಶೇಖರ ಗೌಡರ ರಾಜಕೀಯದ ಹಾದಿ

ಗೋನಾಳು ರಾಜಶೇಖರ ಗೌಡ ಅವರು ಬಿಜೆಪಿಯ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, 2013ರಲ್ಲಿ ಶ್ರೀರಾಮುಲು ಅವರ ನೇತೃತ್ವದ ಬಿಎಸ್‌ಆರ್ ಪಕ್ಷವನ್ನು ಸೇರಿ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಪರಾಜಿತರಾಗಿದ್ದರು. ರಾಜಶೇಖರ ಗೌಡ ಮತ್ತೆ ಮರಳಿ ಬಿಜೆಪಿ ಸೇರ್ಪಡೆಗೊಂಡಿದ್ದರು. ರಾಜಶೇಖರ ಗೌಡ 2014ರ ಜಿಲ್ಲಾ ಪಂಚಯತಿ ಚುನಾವಣೆಯಲ್ಲಿ ಕೋರ್ಲಗುಂದಿ ಜಿಲ್ಲಾ ಪಂಚಾಯತ್‌ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪರಾಜಿತರಾಗಿದ್ದರು. ಇದೀಗ ಅವರು ಕೆಆರ್‌ಪಿ ಪಕ್ಷವನ್ನು ಸೇರ್ಪಡೆಗೊಂಡಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬೇರೆ ಪಕ್ಷ ಕಟ್ಟಿ ತಪ್ಪು ಮಾಡಿದರು

ಹಾಗೆಯೇ ಬಳ್ಳಾರಿ ನಗರದಲ್ಲಿ ಜನಾರ್ದನ್‌ ರೆಡ್ಡಿ ಸ್ಪರ್ಧೆ ಮಾಡಿದರೂ ನಾನು ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡುವುದಿಲ್ಲ. ಬಿಜೆಪಿಯಲ್ಲಿಯೇ ಇರುತ್ತೇನೆ, ಹಿಂದೆ ಸರಿಯುವುದು ನನ್ನ ಚರಿತ್ರೆಯಲ್ಲಿಯೇ ಇಲ್ಲ ಎಂದು ಹೊಸ ಪಕ್ಷವನ್ನು ಕಟ್ಟಿರುವ ಜನಾರ್ಧನ್‌ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಬಳ್ಳಾರಿಯಲ್ಲಿ ಇತ್ತೀಚೆಗಷ್ಟೇ ತಿರುಗಿಬಿದ್ದಿದ್ದರು. ಹಾಗೆಯೇ ಜನಾರ್ಧನ್‌ ರೆಡ್ಡಿಯವರು ಬೇರೆ ಪಕ್ಷ ಸ್ಥಾಪಿಸಿ ತಪ್ಪು ಮಾಡಿದರು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಜನಾರ್ದನ್‌ ರೆಡ್ಡಿ ಪಕ್ಷ ಸ್ಥಾಪನೆ ವೇಳೆ ನನಗೂ ಕೇಳಿದರು. ಬೇರೆ ಪಕ್ಷ ಕಟ್ಟುವುದು ಬೇಡವೆಂದರೂ ಕೇಳಲಿಲ್ಲ. ಮಾತು ಕೇಳದೇ ಅವರು ಪಕ್ಷ ಸ್ಥಾಪನೆ ಮಾಡಿದ್ದಾರೆ. ರಾಜಕೀಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು. ಜನಾರ್ಧನ್‌ ರೆಡ್ಡಿ ಹೊಸ ಪಕ್ಷ ಕಟ್ಟಿ 100% ತಪ್ಪು ಮಾಡಿದ್ದಾರೆ. ರೆಡ್ಡಿ ಪಕ್ಷ ಸ್ಥಾಪನೆ ವಿಚಾರದಲ್ಲಿ ಮುನ್ನೆಡೆ, ಹಿನ್ನೆಡೆಯನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದರು.