ಫೆ.22-25ರ ತನಕ ಬೆಂಗಳೂರು 'ರಾಷ್ಟ್ರೀಯ ತೋಟಗಾರಿಕೆ ಮೇಳ 2023', ಏನೇನಿರಲಿದೆ?

ಬೆಂಗಳೂರು, ಜನವರಿ 27: ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ಹಾಗೂ ತೋಟಗಾರಿಕೆ ಬೆಳೆಗಳ ಕುರಿತು ಸಮಸ್ಯೆಗಳ ಪರಿಹಾರ ಸೇರಿದಂತೆ ಅನೇಕ ಅಂಶಗಳನ್ನು ತಿಳಿಸುವ ಸಲುವಾಗಿ ಬೆಂಗಳೂರಿನ ಹೆಸರಘಟ್ಟದಲ್ಲಿ ಮುಂದಿನ ತಿಂಗಳ ಫೆಬ್ರುವರಿ 22ರಿಂದ 25ರವರೆಗೆ 'ರಾಷ್ಟ್ರೀಯ ತೋಟಗಾರಿಕೆ ಮೇಳ 2023' ಹಮ್ಮಿಕೊಳ್ಳಲಾಗಿದೆ.
ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ವತಿಯಿಂದ ನಾಲ್ಕು ದಿನಗಳ ಕಾಲ ಸಂಸ್ಥೆಯ ವಿಶಾಲ ಆವರಣದಲ್ಲಿ 'ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ' ಎಂಬ ವಿಷಯದಡಿ ಈ ರಾಷ್ಟ್ರಮಟ್ಟದ ಬೃಹತ್ ಮೇಳ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾರಿ ವಿಶೇಷವಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR), ಐಸಿಎಆರ್ ಜೊತೆಗೆ ಇನ್ನಿತರ ಸಂಸ್ಥೆಗಳು ಹಾಗೂ ತೋಟಗಾರಿಕೆ ಉದ್ಯಮಿಗಳ ಸಹಯೋಗದಲ್ಲಿ ಮೇಳ ನಡೆಯಲಿದ್ದು, ಲಕ್ಷಾಂತರ ರೈತರು ಆಗಮಿಸಲಿದ್ದಾರೆ. ರೈತರು ಮತ್ತು ತೋಟಗಾರಿಕೆ ಉದ್ಯಮಿಗಳು ತಯಾರಿಸಿದ ಹೊಸ ತಂತ್ರಜ್ಞಾನಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ಸಂಸ್ಥೆ ಹೊಸದಾಗಿ ಸೃಷ್ಟಿಸಿದ ತಳಿಗಳು, ಅಭಿವೃದ್ಧಿ ಪಡಿಸಿದ ತೋಟಗಾರಿಕೆ ಬೀಜಗಳು ಮೇಳದಲ್ಲಿರಲಿವೆ.
ಮುಖ್ಯವಾಗಿ ಸಾವಯವ ಪದ್ಧತಿಗೆ ಸದಾ ಒತ್ತು ನೀಡುವ ಸಂಸ್ಥೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಕೆ ಬಗ್ಗೆ ಮಾಹಿತಿ ನೀಡುತ್ತದೆ. ಇಂತಹ ಅನೇಕ ವಿಚಾರ ವಿನಿಮಯಗಳ ಕುರಿತು ಚರ್ಚಾಗೋಷ್ಠಿಗಳು ನಡೆಯಲಿವೆ. ಈ ಬೃಹತ್ ರಾಷ್ಟ್ರೀಯ ಮೇಳದಲ್ಲಿ ಏನಿರಲಿದೆ ಎಂಬ ಮಾಹಿತಿ ಇಲ್ಲಿ ತಿಳಿಯಬಹುದು.