ಮಗನ ಸಾವಿನಲ್ಲೂ ಮಾನವೀಯತೆ ಮೆರೆದ ಮಹಾನ್ ಪೋಷಕರು

ಮಗನ ಸಾವಿನಲ್ಲೂ ಮಾನವೀಯತೆ ಮೆರೆದ ಮಹಾನ್ ಪೋಷಕರು

ಹುಬ್ಬಳ್ಳಿ : ಈ ದಂಪತಿಗಳು ಆ ಮಗುವಿನಿಂದ ತುಂಬಾ  ಕನಸು ಕಟ್ಟಿಕೊಂಡಿದ್ರು.ಅದಕ್ಕಾಗಿಯೇ ನಮ್ಮ ಮಗ ಹೀಗೆ ಆಗ್ತಾನೆ,ಹಾಗೆ ಆಗ್ತಾನೆ ನಾವು ಆತನನ್ನ ಹೀಗೆ ಬೆಳೆಸೋಣ ಹಾಗೆ ಶಿಕ್ಷಣ ಕೊಡಿಸೋಣ ಅಂದುಕೊಂಡಿದ್ರು ಆದ್ರೆ ದುರಾದೃಷ್ಟ ಆ ಮಗು ಆರೋಗ್ಯ ಸಮಸ್ಯೆಯಿಂದಾಗಿ  ಬದುಕುಳಿಯುವುದೇ    ಕಷ್ಟ ಅಂತಾ ವೈದ್ಯರು ಹೇಳಿದಾಗಲೂ ಆ ಪೋಷಕರು ಮಾತ್ರ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಹಿಸಿಕೊಳ್ಳಲಾಗದ ನೋವಲ್ಲೂ ಮಗುವಿನ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ.ಅದರಂತೆ ನೇತ್ರದಾನ ಮಾಡಿ ಇನ್ನೊಂದು ಜೀವದ ಬಾಳಿಗೆ ಬೆಳಕಾಗಿದ್ದಾರೆ. 

ಹೌದು ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದ ನಿವಾಸಿಗಳಾದ ಜಗದೀಶ್ ಸಿಂಗ್ ಹಾಗೂ ಕಾವ್ಯ ದಂಪತಿಗಳು  ಆರು ವರ್ಷದ ಮಗನನ್ನು ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದುಕೊಂಡ ನೋವಿನಲ್ಲೂ  ಮಗನ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮಗ ಆರ್ಯನ್ ಸಿಂಗ್ ವಿಪರೀತ ಜ್ವರದ ಬಾಧೆಗೆ ಒಳಗಾಗಿದ್ರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆನಂತರದ ದಿನಗಳಲ್ಲಿ ಚೇತರಿಕೆ ಕಾಣುತ್ತಿದ್ದ ಆರ್ಯನ್ ಆರೋಗ್ಯ ಮತ್ತೆ ಕೈಕೊಟ್ಟಿತ್ತು. ಹೀಗಾಗಿ ವೈದ್ಯರು ಆರ್ಯನ್ ಬದುಕುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ. ಇನ್ನೇನು ಮಾಡುವುದು ಅಂತಾ ಜಗದೀಶ್ ಸಿಂಗ್ ಹಾಗೂ ಕಾವ್ಯ ದಂಪತಿಗಳು ತನ್ನ ಮಗುವಿನ ಕಣ್ಣು ದಾನ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಕಳೆದ ಸೋಮವಾರ ಬಾಲಕ ಮೃತಪಟ್ಟಿದ್ದಾನೆ. ನಂತರ ತಮ್ಮ ನಿರ್ಧಾರದಂತೆ ಈ ದಂಪತಿಗಳು ಆರ್ಯನ್  ಕಣ್ಣುಗಳನ್ನ  ದಾನ ಮಾಡುವ ಮೂಲಕ ಇನ್ನೊಬ್ಬರ ದೃಷ್ಟಿಯಲ್ಲಿ ತಮ್ಮ ಮಗನನ್ನ ಕಾಣ್ತಾಯಿದ್ದಾರೆ.

ಇನ್ನು, ಪೋಷಕರ ಅಭಿಲಾಷೆಯಂತೆ ಸತ್ತೂರಿನ ಎಸ್.ಡಿ.ಎಮ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಆ ಮಗುವಿನ ಕಣ್ಣುಗಳ್ನು ಸಂಗ್ರಹಿಸಿದ್ದಾರೆ. ಪೋಷಕರಿಗೆ ಮಗನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಮತ್ತೊಬ್ಬ ಅಂಧನ ಬಾಳಿಗೆ ಕಣ್ಣು ಬೆಳಕು ನೀಡುತ್ತದೆ ಎಂಬ ಸಮಾಧಾನವೇ ಇವರಿಗೆ ಸಂತೃಪ್ತಿ ತಂದಿದೆ.

ಮಕ್ಕಳು  ಮೃತಪಟ್ಟ ನಂತರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಪೋಷಕರ ಸಂಖ್ಯೆ ಅತಿವಿರಳ. ಅಂತಹುದ್ದರಲ್ಲಿ ಈ ಪೋಷಕರು ನಮ್ಮ ಮಗನ ಕಣ್ಣುಗಳನ್ನು ಇನ್ನೊಬ್ಬರಿಗೆ ಉಪಯೋಗವಾಗಲಿ ಎಂದು ನೋವಿನಲ್ಲೂ ಇನ್ನೊಬ್ಬರ ಬಾಳಿಗೆ ನಲಿವು ತರುವ ಮೂಲಕ ಔದಾರ್ಯ ಮೆರೆದಿದ್ದಾರೆ.

ನವೀನ್ ಸೋಲಾರಗೊಪ್ಪ, ನೈನ್ ಲೈವ್ ನ್ಯೂಸ್ ಹುಬ್ಬಳ್ಳಿ