ಆಮ್ ಆದ್ಮಿ ಪಾರ್ಟಿಯಿಂದ ವಿವಿಧೆಡೆ ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರಿನ ; ಕುಮಾರ ಪಾರ್ಕ್‌ನಲ್ಲಿರುವ ಆಮ್ ಆದ್ಮಿ ಪಾರ್ಟಿ ರಾಜ್ಯ ಕಚೇರಿಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ, "ಕನ್ನಡದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಕನ್ನಡ ಶಾಲೆಗಳ ಕಡೆಗಣನೆ, ನಾಡಿನ ಗಡಿ ಪ್ರದೇಶಗಳ ಅಭಿವೃದ್ಧಿಗೆ ನಿರಾಸಕ್ತಿ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ, ಕನ್ನಡಿಗರ ಸರ್ಕಾರಿ ಉದ್ಯೋಗಾವಕಾಶ ಅನ್ಯಭಾಷಿಗರ ಪಾಲಾಗುತ್ತಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ಕನ್ನಡ ಭಾಷೆಗೆ ಆತಂಕ ತಂದಿಟ್ಟಿವೆ.
ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಇತ್ಯರ್ಥ ಪಡಿಸಲು ಆಮ್ ಆದ್ಮಿ ಪಾರ್ಟಿ ಬದ್ಧವಾಗಿದೆ. ಸ್ಥಳೀಯ ನುಡಿ, ಸಂಸ್ಕೃತಿಗೆ ಪೂರಕವಾ ಗುವಂತಹ ಆಡಳಿತ ನೀಡಬೇಕೆಂಬ ನೀತಿಯನ್ನು ಆಮ್ ಆದ್ಮಿ ಪಾರ್ಟಿಯು ದೇಶದೆಲ್ಲೆಡೆ ಪಾಲಿಸುತ್ತಿದೆ" ಎಂದು ಹೇಳಿದರು. ಆಮ್ ಆದ್ಮಿ ಪಾರ್ಟಿ ಮುಖಂಡರಾದ ಕುಶಲಸ್ವಾಮಿ, ಜಗದೀಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು, ಸಂಚಿತ್ ಸೆಹ್ವಾನಿ, ಪ್ರಕಾಶ್ ನೆಡುಂಗಡಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.