2050ರ ವೇಳೆಗೆ ಭಾರತಕ್ಕೆ ನೀರಿನ ಕೊರತೆ ಸಾಧ್ಯತೆ: ಯುಎನ್ ವರದಿ

2050ರ ವೇಳೆಗೆ ಭಾರತಕ್ಕೆ ನೀರಿನ ಕೊರತೆ ಸಾಧ್ಯತೆ: ಯುಎನ್ ವರದಿ

ವದೆಹಲಿ, ಮಾರ್ಚ್ 23: ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಾಗತಿಕ ನಗರಗಳ ಜನಸಂಖ್ಯೆಯು 2016 ರಲ್ಲಿ ಇದ್ದ 933 ಮಿಲಿಯನ್‌ನಿಂದ 2050 ರಲ್ಲಿ 1.7ನಿಂದ 2.4 ಬಿಲಿಯನ್‌ ಜನರಷ್ಟಾಗುವ ನಿರೀಕ್ಷೆಯಿರುವುದರಿಂದ ಭಾರತದ ಮೇಲೆ ತೀವ್ರವಾಗಿ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಯುಎನ್ ಪ್ರಮುಖ ವರದಿ ಮಂಗಳವಾರ ತಿಳಿಸಿದೆ.

ವಿಶ್ವಸಂಸ್ಥೆಯ ಜಲ ಸಮ್ಮೇಳನ 2023ಕ್ಕೆ ಮುಂಚಿತವಾಗಿ ಮಂಗಳವಾರ ಬಿಡುಗಡೆ ಮಾಡಲಾದ 'ಯುನೈಟೆಡ್ ನೇಷನ್ಸ್ ವರ್ಲ್ಡ್ ವಾಟರ್ ಡೆವಲಪ್‌ಮೆಂಟ್ ರಿಪೋರ್ಟ್ 2023: ಪಾಲುದಾರಿಕೆಗಳು ಮತ್ತು ಸಹಕಾರ', ನೀರಿನ ಒತ್ತಡದಲ್ಲಿ ವಾಸಿಸುವ ಸುಮಾರು 80% ಜನರು ಏಷ್ಯಾದಲ್ಲಿ ನಿರ್ದಿಷ್ಟವಾಗಿ ಈಶಾನ್ಯ ಚೀನಾ, ಹಾಗೆಯೇ ಭಾರತ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.

ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಾಗತಿಕ ನಗರ ಜನಸಂಖ್ಯೆಯು 2016ರಲ್ಲಿ 933 ಮಿಲಿಯನ್ (ಜಾಗತಿಕ ನಗರ ಜನಸಂಖ್ಯೆಯ ಮೂರನೇ ಒಂದು ಭಾಗ) ನಿಂದ 1.7ರಿಂದ 2.4 ಶತಕೋಟಿ ಜನರಿಗೆ (ಜಾಗತಿಕ ನಗರ ಜನಸಂಖ್ಯೆಯ ಮೂರನೇ ಒಂದು ಭಾಗದಿಂದ ಸುಮಾರು ಅರ್ಧದಷ್ಟು) 2050ರಲ್ಲಿ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಈ ಬಗ್ಗೆ ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ, ಜಾಗತಿಕ ನೀರಿನ ಬಿಕ್ಕಟ್ಟಿನಿಂದ ಹೊರಗುಳಿಯಲು ಬಲವಾದ ಅಂತಾರಾಷ್ಟ್ರೀಯ ಕಾರ್ಯವಿಧಾನಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ. ನೀರು ನಮ್ಮ ಭವಿಷ್ಯಕ್ಕೆ ಬೇಕಾದ ಸಾಮಾನ್ಯ ಅಗತ್ಯವಾಗಿದೆ. ಅದನ್ನು ಸಮಾನವಾಗಿ ಹಂಚಿಕೊಳ್ಳಲು ಒಟ್ಟಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಅದನ್ನು ಸಮರ್ಥವಾಗಿ ನಿರ್ವಹಿಸಬೇಕಾಗಿದೆ. ಜಾಗತಿಕವಾಗಿ, ಎರಡು ಶತಕೋಟಿ ಜನರಿಗೆ ಸುರಕ್ಷಿತ ಕುಡಿಯುವ ನೀರು ಇಲ್ಲ ಮತ್ತು 3.6 ಶತಕೋಟಿ ಜನರು ಸುರಕ್ಷಿತವಾಗಿ ನಿರ್ವಹಿಸಿದ ನೈರ್ಮಲ್ಯಕ್ಕೆ ಪ್ರವೇಶವನ್ನು ಹೊಂದಿಲ್ಲ ಎಂದು ವರದಿಯು ತಿಳಿಸಿದೆ.

ಈ ವರದಿಯ ಮುಖ್ಯ ಸಂಪಾದಕ ರಿಚರ್ಡ್ ಕಾನರ್ ಅವರು ಜಾಗತಿಕವಾಗಿ ನೀರಿನ ಮೇಲಿನ ಅನಿಶ್ಚಿತತೆಗಳು ಹೆಚ್ಚುತ್ತಿವೆ. ನಾವು ಅದನ್ನು ಪರಿಹರಿಸದಿದ್ದರೆ, ಖಂಡಿತವಾಗಿಯೂ ಜಾಗತಿಕ ಬಿಕ್ಕಟ್ಟು ಉಂಟಾಗುತ್ತದೆ. ಕಡಿಮೆ ಲಭ್ಯತೆ ಮತ್ತು ಹೆಚ್ಚಿದ ಬೇಡಿಕೆ ಈಗ ಪ್ರತಿಬಿಂಬಿತವಾಗುತ್ತಿದೆ. ನಗರ ಮತ್ತು ಕೈಗಾರಿಕಾ ಬೆಳವಣಿಗೆಯಿಂದ ಕೃಷಿಯವರೆಗೆ ನೀರಿನ ಕೊರತೆಯು ಪ್ರಪಂಚದ 70 ಪ್ರತಿಶತವನ್ನು ಮಾತ್ರ ಪೂರೈಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ತಮ್ಮ ವರದಿಯಲ್ಲಿ ನೀರು ಮಾನವರ ಜೀವಾಳವಾಗಿದೆ. ಇದು ಜೀವರಾಶಿಗಳ ಉಳಿವಿಗಾಗಿ ಅತ್ಯಗತ್ಯವಾಗಿದೆ. ಜನರು ಮತ್ತು ಗ್ರಹದ ಆರೋಗ್ಯ, ಸ್ಥಿತಿಸ್ಥಾಪಕತ್ವ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಇದು ಬೆಂಬಲಿಸುತ್ತದೆ. ಆದರೆ ಈಗ ಮಾನವೀಯತೆಯು ಕುರುಡಾಗಿ ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದೆ. ನೀರಿನ ಮಿತಿಮೀರಿದ ಬಳಕೆ ಮತ್ತು ಅತಿಯಾದ ಅಭಿವೃದ್ಧಿ, ಸಮರ್ಥನೀಯವಲ್ಲದ ನೀರಿನ ಬಳಕೆ, ಮಾಲಿನ್ಯ ಮತ್ತು ಅನಿಯಂತ್ರಿತ ಜಾಗತಿಕ ತಾಪಮಾನ ಏರಿಕೆಯು ನೀರನ್ನು ಬರಿದುಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಈ ವರದಿಯು ನಮಗೆ ಭವಿಷ್ಯದ ಪೀಳಿಗೆಗೆ ಈ ಅಮೂಲ್ಯ ಸಂಪನ್ಮೂಲವನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಪಾಲುದಾರಿಕೆಗಳ ಮೇಲೆ ಅವಲಂಬಿತವಾಗಿದೆ. ವಿಶ್ವದ ಜಲ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆ ಮಾಡಬೇಕಿದೆ. ಇದಕ್ಕಾಗಿ ಸರ್ಕಾರಗಳು, ವ್ಯವಹಾರಗಳು, ವಿಜ್ಞಾನಿಗಳು, ನಾಗರಿಕ ಸಮಾಜ ಮತ್ತು ಸ್ಥಳೀಯ ಸಮುದಾಯಗಳು ಸೇರಿದಂತೆ ಸಮುದಾಯಗಳನ್ನು ಒಟ್ಟುಗೂಡಿಸಬೇಕಾಗಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ 2023ರ ವಿಶ್ವಸಂಸ್ಥೆಯ ಜಲ ಸಮ್ಮೇಳನವು ಸಾಮೂಹಿಕ ಪ್ರಗತಿಗೆ ನಿರ್ಣಾಯಕ ಕ್ಷಣವಾಗಿದೆ. ಸುಮಾರು ಅರ್ಧ ಶತಮಾನದಲ್ಲಿ ನೀರಿನ ಮೇಲಿನ ಮೊದಲ ಪ್ರಮುಖ ವಿಶ್ವಸಂಸ್ಥೆ ಸಭೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿ 6: ಎಲ್ಲರಿಗೂ ಶುದ್ಧ ನೀರು ಮತ್ತು ನೈರ್ಮಲ್ಯದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಗುಟೆರೆಸ್ ಹೇಳಿದ್ದಾರೆ.